ಹಿಂಗಾರು ಹಂಗಾಮಿಗೆ ಮಾರ್ಚ್ ಅಂತ್ಯದವರೆಗೂ ನೀರು ಹರಿಸಲು ರೈತರ ಒತ್ತಾಯ
ಆಲಮಟ್ಟಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐಸಿಸಿ ಸಭೆ ನಡೆಯುವ ಆಲಮಟ್ಟಿಯ ಕೆಬಿಜೆಎನ್ ಎಲ್ ಎಂಡಿ ಕಚೇರಿ ಎದುರು ಬೆಳಿಗ್ಗೆಯಿಂದಲೇ ಬೇರೆ ಬೇರೆ ಭಾಗದಿಂದ ಬಂದಿದ್ದ ನೂರಾರು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸಬೇಕು, ಹಿಂಗಾರು ಹಂಗಾಮಿಗೆ ಮಾರ್ಚ್ ಅಂತ್ಯದವರೆಗೂ ನೀರು ಹರಿಸಬೇಕು ಎಂಬುದೇ ಬಹುತೇಕ ರೈತರ ಬೇಡಿಕೆಯಾಗಿತ್ತು.
ಹಿಂಗಾರಿಗೆ ನೀರಿಲ್ಲ ಎಂದು ತಿರ‍್ಮಾನವಾದೊಡನೆ ಶಾಂತವಾಗಿದ್ದ ರೈತರು ಕೆಬಿಜೆಎನ್ ಎಲ್ ಎಂಡಿ ಕಚೇರಿಯ ಸಭಾಂಗಣದ ಗೇಟ್ ಹೊರಕ್ಕೆ ಯಾದಗೀರದಿಂದ ಬಂದಿದ್ದ ಕರ‍್ನಾಟಕ ಪ್ರಾಂತ ರೈತ ಸಂಘದ ಕಾರ‍್ಯಕರ‍್ತರು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಹೊರಕ್ಕೆ ಬಿಡಲಿಲ್ಲ.
ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಅವರ ವಾಹನ ಹೊರಬಿಟ್ಟರು. ಆದರೆ ನಂತರ ಕೆಬಿಜೆಎನ್ ಎಲ್ ಅಧಿಕಾರಿಗಳನ್ನು ಸಭೆ ನಡೆಯುವ ಹೊರ ಗೇಟ್ ನಲ್ಲಿ ರೈತರು ಹೊರ ಹೋಗದಂತೆ ತಡೆಗಟ್ಟಿದರು.
ಜೇವರ್ಗಿ ರೈತರ ಪ್ರತಿಭಟನೆ:
ಕಲಬುರಗಿ ಜಿಲ್ಲೆಯ ಜೇವರ್ಗಿ, ಕಾಚಾಪುರ, ಯಡ್ರಾಮಿ, ಮಳ್ಳಿ, ವಡಗೇರ, ಸುಂಬಡ ಭಾಗದಿಂದ ಆಗಮಿಸಿದ್ದ ನೂರಾರು ರೈತರು, ೨೦೨೪ ರ ಮಾರ್ಚ್ ಅಂತ್ಯದವರೆಗೂ ನೀರು ಹರಿಸಬೇಕು ಎಂದು ಅವರು ಪ್ರತಿಭಟನೆ ನಡೆಸಿದರು.
ಕಾಲುವೆ ಸಮರ್ಪಕ ನೀರು ಹರಿಸದ ಕಾರಣ ಮುಂಗಾರು ಹಂಗಾಮಿಗೆ ಬೆಳೆದ ಈಗಾಗಲೇ ತೊಗರಿ, ಹತ್ತಿ ಬೆಳೆ ನಾಶವಾಗಿದೆ. ಈಗ ಮೆಣಸಿನಕಾಯಿ, ಕಡಲೆ, ಜೋಳ, ಕುಶಬಿ ಬೆಳೆಗೆ ನೀರು ಅಗತ್ಯವಿದೆ ಎಂದು ಅವರು ಪ್ರತಿಭಟನೆ ನಡೆಸಿದರು.
ಕಲಬುರಗಿ, ಯಾದಗೀರ ಭಾಗದ ರೈತರನ್ನು ಸಭೆ ನಡೆಯುವ ಸನೀಹಕ್ಕೆ ಬಿಟ್ಟ ಪೊಲೀಸರು, ಈ ಭಾಗದ ರೈತರನ್ನು ಸಭೆ ನಡೆಯುವ ಒಂದು ಕಿ.ಮೀ ದೂರದ ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ ವೃತ್ತದ ಬಳಿಯೇ ನಿಲ್ಲಿಸಿದರು. ಆ ರೈತರ ಮುಖಂಡರನ್ನು ಮಾತ್ರ ಒಳಕ್ಕೆ ಬಿಟ್ಟರು. ಇದು ಕೂಡಾ ಅಸಮಾಧಾನಕ್ಕೆ ಕಾರಣವಾಯಿತು.
ಭಾರಿ ಪೊಲೀಸ್ ಬಂದೋಬಸ್ತ:
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ನೇತೃತ್ವದಲ್ಲಿ ಡಿವೈಎಸ್ ಪಿ ಕರುಣಾಕರಶೆಟ್ಟಿ, ಮೂವರು ಸಿಪಿಐ, ಏಳು ಜನ ಪಿಎಸ್ ಐ ಸೇರಿ ೬೫ ಜನ ಪೊಲೀಸ್ ಸಿಬ್ಬಂದಿ ಹಾಗೂ ಎರಡು ಡಿಆರ್ ವ್ಯಾನ್ ಪೊಲೀಸರು ಇದ್ದರು.