ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಿರ್ಮಾನ :ಸಚಿವ ಆರ್.ಬಿ.ತಿಮ್ಮಾಪುರ
ಆಲಮಟ್ಟಿ: ನೀರಿನ ಕೊರತೆಯಿಂದಾಗಿ ೨೦೨೩-೨೪ನೇ ಸಾಲಿನ ಹಿಂಗಾರು ಹಂಗಾಮಿಗೆ ಕಾಲುವೆ ಜಾಲಕ್ಕೆ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರು ಸಹಕರಿಸಬೇಕು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ೨೦೨೩-೨೪ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಿಂಗಾರು ಹಂಗಾಮಿಗೆ ೨೦೨೩-೨೪ನೇ ಸಾಲಿನಲ್ಲಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆ.೧೪ರಂದು ಕ್ಷೀಣವಾಗಿದ್ದು, ಅ.೧೫ರಂದು ಸಂಪೂರ್ಣ ಸ್ಥಗಿತವಾಗಿದೆ. ಡಿ.೫ರಂದು ಅಲಮಟ್ಟಿ ಜಲಾಶಯದ ಮಟ್ಟ ಅಂದಾಜು ೫೧೩.೦೦ ಮೀಟರ್ ಎತ್ತರದಲ್ಲಿ ೫೦ ಟಿಎಂಸಿ ನೀರು ಇರಬಹುದಾಗಿದೆ. ಇದರಲ್ಲಿ ಜೀವಜಲ ೩೨ ಟಿಎಂಸಿ ಹಾಗೂ ನಾರಾಯಣಪುರ ಜಲಾಶಯದ ಜೀವಜಲ ೧೨ ಟಿಎಂಸಿ ಒಟ್ಟು ೪೪ ಟಿಎಂಸಿ ಜೀವಜಲ ಲಭ್ಯವಾಗಬಹುದು ಎಂದರು.
ಡಿ.೫ರಿಂದ ೨೦೨೪ರ ಜು.೩೦ವರೆಗೆ ಕುಡಿವ ನೀರು, ಕೆರೆಗಳನ್ನು ತುಂಬುವುದು, ಕಾಲುವೆಗಳ ಮೂಲಕ ಕುಡಿವ ನೀರಿನ ಯೋಜನೆಗಳಿಗೆ ನೀರು ಪೂರೈಸುವುದು, ಭಾಷ್ಪಿಕರಣ, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹಾಗೂ ಕೈಗಾರಿಕೆಗಳಿಗೆ, ಬ್ಯಾರೇಜ್‌ಗಳಲ್ಲಿ ನೀರಿನ ಸಂಗ್ರಹಣೆ, ರೈತರ ಹಿನ್ನೀರಿನ ಬಳಕೆ ಇತ್ಯಾದಿ ಸೇರಿದಂತೆ ಈ ಮೊದಲು ಕಾಯ್ದಿರಿಸಿಕೊಂಡ ೩೭.೨೫ ಟಿಎಂಸಿ, ಬದಲಾಗಿ ೪೦ ಟಿಎಂಸಿ ನೀರನ್ನು ಕಾಯ್ದಿರಿಸಲಾಗಿದೆ ಎಂದರು.
ಸದ್ಯ ಚಾಲ್ತಿಯಲ್ಲಿರುವ ವೇಳಾಪಟ್ಟಿಯಂತೆ ನ.೧೮ರವರೆಗೆ ಕಾಲುವೆ ಜಾಲಕ್ಕೆ ನೀರು ಪೂರೈಸುವುದನ್ನು ಚಾಲ್ತಿಯಲ್ಲಿಡಲಾಗುವುದು, ನ.೧೯ರಿಂದ ೨೬ರವರೆಗೆ ೮ ದಿನ ಕಾಲುವೆ ಜಾಲಕ್ಕೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗುವುದು. ನಂತರ ನ.೨೭ರಿಂದ ಡಿ.೪ರವರೆಗೆ ೮ ದಿನಗಳಿಗೆ ಕಾಲುವೆ ಜಾಲಕ್ಕೆ ನೀರು ಪೂರೈಸುವುದನ್ನು ಮಿತವ್ಯಯ ಸಾಧಿಸಿ ಕೊನೆಯಂಚಿನವರೆಗೆ ಪೂರೈಸಲು ಅನುಕೂಲವಾಗುವಂತೆ ಹೆಚ್ಚುವರಿ ದಿನಗಳಿಗೆ ವಿಸ್ತರಿಸಲು ನಿರ್ಣಯಿಸಲಾಗಿದೆ. ರೈತರು ಅನಗತ್ಯವಾಗಿ ನೀರು ಪೋಲು ಮಾಡದೆ ಬಳಸಿ ಕೆಬಿಜೆನ್ನೆಲ್ ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಸಂಸದ ಪಿ.ಸಿ.ಗದ್ದಿಗೌಡರ, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ, ಎಂಎಲ್ಸಿ ಪಿ.ಎಚ್.ಪೂಜಾರ, ಸಿಂದಗಿ ಶಾಸಕ ಅಶೋಕ ಮನಗೂಳಿ, ನಾಗಠಾಣದ ವಿಠ್ಠಲ ಕಟಕದೊಂಡ, ಇಂಡಿಯ ಯಶವಂತರಾಯಗೌಡ ಪಾಟೀಲ, ಹುನಗುಂದದ ವಿಜಯಾನಂದ ಕಾಶಪ್ಪನವರ, ಬೀಳಗಿಯ ಜೆ.ಟಿ.ಪಾಟೀಲ, ಜಮಖಂಡಿಯ ಜಗದೀಶ ಗುಡಗಂಟಿ, ಸುರಪುರ ಶಾಸಕ ರಾಜಾವೆಂಕಟಪ್ಪ ನಾಯಕ, ದೇವದುರ್ಗ ಶಾಸಕಿ ಕರೆಮ್ಮ ನಾಯಕ, ಎಂಎಲ್ಸಿ ಹಣಮಂತ ನಿರಾಣಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಜಿಲ್ಲಾಕಾರಿಗಳು. ಆಲಮಟ್ಟಿ, ನಾರಾಯಣಪುರ, ಭೀಮರಾಯನಗುಡಿ, ರಾಂಪೂರ ವಲಯದ ಮುಖ್ಯಅಭಿಯಂತರರು ಇದ್ದರು.