ಮುದ್ದೇಬಿಹಾಳದಲ್ಲಿ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆ
ಮುದ್ದೇಬಿಹಾಳ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಎಲ್ಲಂದರಲ್ಲಿ ರಸ್ತೆಗಳನ್ನು ಅನಧಿಕೃತವಾಗಿ ಅತಿಕ್ರಮಿಸಿ ಡಬ್ಬಾ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತ, ವಾಹನ ಸವಾರರಿಗೆ, ಪಾದಾಚಾರಿಗಳಿಗೆ ದಿನಂಪ್ರತಿ ತೊಂದರೆ ನೀಡುತ್ತಿದ್ದವರ ಮೇಲೆ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಜಂಟಿಯಾಗಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಕಳೆದ ಕೆಲವು ದಿನಗಳ ಹಿಂದೆಯೇ ಪಟ್ಟಣದಲ್ಲಿ ರಸ್ತೆಯನ್ನು ಅತಿಕ್ರಮಣ ಮಾಡಿದವರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸುವಂತೆ ಪ್ರಕಟಣೆಯ ಮೂಲಕ ತಿಳಿಸಿದ್ದು, ಪಟ್ಟಣದ ಆಲಮಟ್ಟಿ, ತಂಗಡಗಿ, ಮುಖ್ಯ ಬಜಾರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕಾರ್ಯಪ್ರವೃತ್ತರಾಗಿ ರಸ್ತೆಯನ್ನು ಅತಿಕ್ರಮಿಸಿ ತಮ್ಮ ಅನುಕೂಲಕ್ಕಾಗಿ ಸ್ವಲ್ಪ ಮಟ್ಟಿಗೆ ಕಟ್ಟಡ ಮಾಡಿಕೊಂಡು ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದವರನ್ನು ಸೇರಿದಂತೆ ಯಾವ ಪ್ರಭಾವಕ್ಕೂ ಒಳಗಾಗದೇ ತಮ್ಮ ದಿಟ್ಟತನ ತೋರಿದರು.
ಈ ವೇಳೆ ಪಿಎಎಸ್‌ಐ ಸಂಜೀವ ತಿಪರೆಡ್ಡಿ ಮಾತನಾಡಿ, ಹಲವು ದಿನಗಳಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಪುರಸಭೆಯವರ ಸಹಕಾರದೊಂದಿಗೆ ಇಂದು ಕಾರ್ಯಾಚರಣೆಗೆ ಇಳಿದಿದ್ದೇವೆ. ಈ ಕಾರ್ಯಾಚರಣೆ ಕೇವಲ ಒಂದೆರಡು ದಿನ ಮಾತ್ರವಲ್ಲ. ನಿರಂತರವಾಗಿರುತ್ತೆ. ಯಾವ ಭಾಗದಲ್ಲಿ ನಾವು ತೆರವುಗೊಳಿಸಿದ್ದೇವೆ ಆ ಭಾಗದಲ್ಲಿ ಮತ್ತೆ ಅತಿಕ್ರಮಣ ನಡೆಸಿದರೆ ಅಂಥವರ ಮೇಲೆ ಮುಲಾಜಿಲ್ಲದೇ ಕೇಸ್ ದಾಖಲಿಸಿಸುತ್ತೇನೆ. ಕೇಸ್ ಮಾಡುವಾಗ ತಮ್ಮ ವ್ಯಕ್ತಿಯ ಮೇಲೆ ಕೇಸ್ ದಾಖಲಿಸದಂತೆ ಒತ್ತಡ ಹೇರಲು ಬರುವ ಪ್ರಭಾವಿಗಳು ಈಗಲೇ ನಿಮ್ಮ ವ್ಯಕ್ತಿಗಳಿಗೆ ತಿಳಿ ಹೇಳಿ. ನಂತರ ನಾನು ಯಾರ ಒತ್ತಡಕ್ಕೂ ಒಳಗಾಗಲ್ಲ ಎಂದು ಖಡಕ್ ಸಂದೇಶವನ್ನು ಕೊಟ್ಟಿದ್ದಾರೆ.
ತೆರವು ಕಾರ್ಯಾಚರಣೆ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ವ್ಯಕ್ತವಾಗಿದೆ. ಹಲವರು ಇಂತಹ ದಿಟ್ಟ ಅಧಿಕಾರಿಗಳು ನಮ್ಮಲ್ಲಿ ಬಂದಿದ್ದು ಸಂತಸ ಮೂಡಿಸಿದೆ ಎನ್ನುವ ಮಾತುಗಳು ಕೇಳಿಬಂದವು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಭಾಯಿ, ಪುರಸಭೆಯ ಮಾಂತು ಕಟ್ಟಿಮನಿ, ಜಾವೇದ ನಾಯ್ಕೋಡಿ ಸೇರಿದಂತೆ ಮತ್ತೀತರರು ಇದ್ದರು.