ನಿಯಮಬಾಹಿರ ವೇತನ ಪಾವತಿ | ಅಪರ ಆಯುಕ್ತೆ ಜಯಶ್ರೀ ಆದೇಶ
ಮುದ್ದೇಬಿಹಾಳ: ನಿಯಮ ಬಾಹಿರವಾಗಿ ವೇತನ ಪಾವತಿಸಿದ ಆರೋಪದಡಿ ಇಲ್ಲಿನ ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ೬ ಸಿಬ್ಬಂದಿಯನ್ನು ಅಮಾನತ್ತು ಮಾಡಿ ಶಿಕ್ಷಣ ಇಲಾಖೆಯ ಧಾರವಾಡದ ಅಪರ್ ಆಯುಕ್ತೆ ಜಯಶ್ರೀ ಶಿಂತ್ರಿ ಆದೇಶಿಸಿದ್ದಾರೆ.
ಹಿಂದೆ ಇಲ್ಲಿನ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಪತ್ರಾಂಕಿತ ವ್ಯವಸ್ಥಾಪಕ ಎ.ಎಸ್.ಹಾಲ್ಯಾಳ, ಪ್ರ.ದ.ಸ ಎಸ್.ಎಸ್.ಕಲ್ಬುರ್ಗಿ, ಪ್ರ.ದ.ಸ ಎಸ್.ಸಿ.ಮುರಗಾನವರ, ಸಧ್ಯ ಸೇವೆ ಸಲ್ಲಿಸುತ್ತಿರುವ ಅಧೀಕ್ಷಕಿ ಎನ್.ಬಿ.ರೂಡಗಿ, ದ್ವಿ.ದ.ಸ ಎಸ್.ಸಿ.ಹಿರೇಮಠ, ಮತ್ತು ಪ್ರ.ದ.ಸ ಸಿದ್ದನಗೌಡ ಪಾಟೀಲ ಅಮಾನತ್ತಾದ ಸಿಬ್ಬಂದಿಗಳು.
ತಾಲೂಕು ವ್ಯಾಪ್ತಿಯಲ್ಲಿ ನಿಯಮಬಾಹಿರ ಶಿಕ್ಷಕರ ಅಮಾನತ್ತು ಹಾಗೂ ಕೆಲಸಕ್ಕೆ ಗೈರು ಉಳಿದ ಶಿಕ್ಷಕರಿಗೆ ವೇತನ ಪಾವತಿ ಮತ್ತು ನಿವೃತ್ತಿ ಹೊಂದಿದ ಶಿಕ್ಷಕರಿಗೂ ಸಹ ವೇತನ ಪಾವತಿ ಆದ ಬಗ್ಗೆ ತಪಾಸಣೆ ನಡೆಸಿದ ಬಳಿಕ ಕಚೇರಿ ಸಿಬ್ಬಂದಿ ಸರ್ಕಾರಿ ನೌಕರರ ನಡುವಳಿಕೆಗೆ ಸಲ್ಲದ ರೀತಿಯಲ್ಲಿ ನಡೆದುಕೊಂಡು ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು, ೨೦೨೧ ರ ನಿಯಮಗಳನ್ನು ಉಲ್ಲಂಘಿಸಿರುವದು ಮೇಲ್ನೋಟಕ್ಕೆ ಕಂಡು ಬಂದಿರುವದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ೧೯೫೭ ರ ನಿಯಮ ೧೦(೧)(ಡಿ) ಅನ್ವಯ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.