ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ತಂಡದಿಂದ ಬರ ಅಧ್ಯಯನ
ವಿಜಯಪುರ: ತಿಕೋಟಾ ತಾಲೂಕಿನ ಜಾಲಗೇರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಶನಿವಾರ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ನೇತೃತ್ವದ ತಂಡ ಬರ ಅಧ್ಯಯನ ನಡೆಸಿ ಪರಿಸ್ಥಿತಿ ಅವಲೋಕಿಸಿತು. ತೊಂದರೆ ಎದುರಿಸುತ್ತಿರುವ ರೈತರ ಅಹವಾಲು ಆಲಿಸಿತು.
ಅನೇಕ ರೈತರು ತಾವು ಎದುರಿಸುತ್ತಿರುವ ನೋವನ್ನು ತಂಡದ ಸದಸ್ಯರ ಎದುರು ತೋಡಿಕೊಂಡರು.
ಜಿಲ್ಲೆಯ ತಿಕೋಟಾ ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ, ತಿಕೋಟಾ ತಾಲೂಕಿನಲ್ಲಿಯೂ ಸಹ ಬರ ಭೀಕರವಾಗಿದೆ ಎಂದು ಕಟೀಲ್ ಮೊದಲಾದ ತಂಡದ ಸದಸ್ಯರು ತಿಕೋಟಾ ತಾಲೂಕನ್ನೇ ಆಯ್ಕೆ ಮಾಡಿ ಬರ ಅಧ್ಯಯನ ನಡೆಸಿದರು.
ಜಾಲಗೇರಿಯಲ್ಲಿ ಮೆಕ್ಕೆಜೋಳ ಬೆಳೆ ಸಂಪೂರ್ಣವಾಗಿ ಬಾಡಿ ಹೋಗಿರುವುದನ್ನು ಗಮನಿಸಿದರು. ಈ ವೇಳೆ ಅಳಲು ತೋಡಿಕೊಂಡ ಅನೀಲ್ ಲಮಾಣಿ, ಸಿದ್ಧು ಒಡೆಯರ ಮೊದಲಾದ ರೈತರು `ನಮಗೆ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ, ಯಾವ ರೀತಿಯ ಸ್ಪಂದನೆಯೂ ಸಹ ನಮಗೆ ದೊರಕದಂತಾಗಿದೆ, ನಮ್ಮ ಸಂಕಷ್ಟ ಯಾರಿಗೂ ಬರಬಾರದು, ಸಾಲ ಸೋಲ ಮಾಡಿದ ಬೆಳೆ ಕೈಗೆ ಬರುತ್ತಿಲ್ಲ, ಏನಾದರೂ ಮಾಡಿ ವಿದ್ಯುತ್ ಸಂಪರ್ಕ ಬಳಸಿ ನೀರು ಹರಿಸೋಣ ಎಂದರೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಅತ್ತ ಪರಿಹಾರವೂ ಇಲ್ಲ, ಇತ್ತ ವಿದ್ಯುತ್ ಸಹ ಇಲ್ಲ, ಸಾಲ ಏರುತ್ತಲೇ ಇದೆ, ಯಾವ ರೀತಿ ಸಂಕಷ್ಟವನ್ನು ಎದುರಿಸುತ್ತಿದ್ದೇವೆ ಎಂದರೆ ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡರು.
ಸರ್ಕಾರದ ನಡೆ ಟೀಕಿಸಿದ ಕಟೀಲ್
ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಯಾವ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್‌ಕುಮಾರ ಕಟೀಲ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಬರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಿಲ್ಲ, ಈಗಾಗಲೇ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿ, ಅಧ್ಯಯನ ಮಾಡಿಸಿದೆ. ಆದರೆ, ರಾಜ್ಯ ಸರ್ಕಾರ ಬರದಿಂದ ಎಷ್ಟು ನಷ್ಟವಾಗಿದೆ ಎಂಬ ವರದಿಯನ್ನೇ ಕೊಟ್ಟಿಲ್ಲ, ಇನ್ನೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ದಿಂದ ತಿಕೋಟಾ ತಾಲ್ಲೂಕನ್ನು ಬರಗಾಲ ಪಟ್ಟಿಯಿಂದ ಹೊರಗಿಡಲ್ಪಟ್ಟಿದೆ, ಪ್ರಭಾವಿ ಸಚಿವರು ತಾವು ಪ್ರತಿನಿಧಿಸುವ ಕ್ಷೇತ್ರವಾಗಿರುವ ತಿಕೋಟವನ್ನೇ ಬರ ಪೀಡಿತ ಎಂದು ಘೋಷಣೆ ಮಾಡುವ ಯೋಗ್ಯತೆ ಇಲ್ಲ ಎಂದು ದೂರಿದ ಕಟೀಲ್, ಇಲ್ಲಿಯವರೆಗೆ ಯಾರೊಬ್ಬ ಸಚಿವರು ರೈತರ ಅಹವಾಲು ಆಲಿಸುವ ಕೆಲಸ ಮಾಡಿಲ್ಲ. ಇದುವರೆಗೂ ರೈತರ ಆಹವಾಲು ಆಲಿಸಿಲ್ಲ ಎಂದು ಆರೋಪಿಸಿದರು.
*ಸಿಎಂ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ*
ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ರೈತರ ಹಿತರಕ್ಷಣೆ ಸಂಪೂರ್ಣವಾಗಿ ಮರೆತಿದ್ದಾರೆ, ಎರಡು ಬಾರಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಅವರಿಗೆ ಆಡಳಿತ ನಡೆಸಲು ಬರುತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅತಿವೃಷ್ಠಿ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರಿಹಾರ ಹಣಕ್ಕೆ ಕಾಯದೇ, ಎನ್‌ಡಿಆರ್ ಎಫ್ ಮಾರ್ಗಸೂಚಿ ಮೀರಿ ತಕ್ಷಣ ಸಂತ್ರಸ್ತ ರೈತರಿಗೆ ಪರಿಹಾರ ಕೊಟ್ಟಿದ್ದರು. ಅದೇ ರೀತಿ ಸಿದ್ದರಾಮಯ್ಯನವರು ರೈತರಿಗೆ ಸೂಕ್ತ ಪರಿಹಾರ ತಕ್ಷಣವೇ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಸದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಉಪಸ್ಥಿತರಿದ್ದರು.