ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯವು ಕಾಲುವೆ ನಿರ್ಮಿಸುವ ಗುತ್ತಿಗೆ ಕೆಲಸ ಹಿಡಿದ ಗುತ್ತಿಗೆದಾರ ನೀಲಕಂಠ ಸಿದ್ದಪ್ಪ ಪೂಜಾರಿ(ಮದರಿ) ಅವರ ನಿರ್ಲಕ್ಷತನ ಸಾಬೀತು ಆಗಿರುವುದರಿಂದ ಅ.೩೧ ರಂದು ಸಿವ್ಹಿಲ್ ನ್ಯಾಯಾಧೀಶೆ ತೇಜಶ್ವಿನಿ ಸೊಗಲದ ಅವರು ಆರೋಪಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ, ರೂ. ೧೦ ಸಾವಿರ ದಂಡ ಹಾಗೂ ೨೮೩ ಐಪಿಸಿಗೆ ರೂ.೨೦೦ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿ ಆದೇಶ ನೀಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಐ ಶರಣಗೌಡ ನ್ಯಾಮಣ್ಣನವರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನ ದಿಂಡವಾರ-ಹೂವಿನಹಿಪ್ಪರಗಿ ರಸ್ತೆಯಲ್ಲಿ ದುಂಡಪ್ಪ ಕುದರಕರ ಅವರ ಜಮೀನು ಹತ್ತಿರ ಗುತ್ತಿಗೆದಾರ ಕಾಲುವೆ ಸೇತುವೆ ನಿರ್ಮಿಸುವಾಗ ರಸ್ತೆಯಿಂದ ಅಗೆದ ಮಣ್ಣನ್ನು ರಸ್ತೆಯ ಮಧ್ಯದಲ್ಲಿ ಎರಡು ಬದಿಗೆ ಹಾಕಿದ್ದರಿಂದಾಗಿ ೭.೧೦.೨೦೧೯ ರಂದು ರಾತ್ರಿ ಮುದ್ದೇಬಿಹಾಳ ತಾಲೂಕಿನ ಪಡೇಕನೂರ ಗ್ರಾಮದ ಶಿವಪ್ಪ ನಿಂಗಪ್ಪ ರೆಬಿನಾಳ ಮೋಟಾರ್ ಸೈಕಲ್ ಮೇಲೆ ಹೋಗುವಾಗ ಅಗೆದ ತೆಗ್ಗಿನಲ್ಲಿ ಬಿದ್ದು ಬಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತನಾಗಿದ್ದನು. ರಸ್ತೆಯ ಮಧ್ಯದಲ್ಲಿ ಎರಡು ಬದಿಗೆ ಮಣ್ಣು ಹಾಕಿದಾಗ ಇದರಿಂದ ರಾತ್ರಿ ಸಂಚರಿಸುವ ವಾಹನ ಸವಾರರಿಗೆ ಕಾಣುವಂತೆ ರೇಡಿಯಂ ಫಲಕಗಳಾಗಲಿ, ಬ್ಯಾರಿಕೇಡ್ಗಳಾಗಲಿ ನಿಲ್ಲಿಸದೇ ರಸ್ತೆ ಕಾಮಗಾರಿ ನಡೆದ ಬಗ್ಗೆ ಯಾವುದೇ ಸೂಚನಾ ಫಲಕ ಹಾಕದೇ ಗುತ್ತಿಗೆದಾರನು ನಿರ್ಲಕ್ಷತನ ಮಾಡಿದ್ದರಿಂದ ರಾತ್ರಿ ವೇಳೆಯಲ್ಲಿ ಮೋಟಾರ್ ಸೈಕಲ್ ಮೇಲೆ ಹೋಗುವಾಗ ಅಗೆದ ತೆಗ್ಗಿನಲ್ಲಿ ಬಿದ್ದು ಶಿವಪ್ಪ ನಿಂಗಪ್ಪ ರೆಬಿನಾಳ ಮೃತ ಪಟ್ಟಿದ್ದನು. ಈ ಕುರಿತು ಮೃತಪಟ್ಟವನ ಅಣ್ಣ ಸಿದ್ದಪ್ಪ ನಿಂಗಪ್ಪ ರೆಬಿನಾಳ ಬಸವನಬಾಗೇವಾಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಪಿಎಸ್ಐ ಚಂದ್ರಶೇಖರ ಹೆರಕಲ್ ಕೈಗೊಂಡಿದ್ದರು. ಆರೋಪಿ ಗುತ್ತಿಗೆದಾರ ನೀಲಕಂಠ ಸಿದ್ದಪ್ಪ ಪೂಜಾರಿ(ಮದರಿ) ಅವರ ಮೇಲಿನ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶರು ಒಂದು ವರ್ಷ ಕಾರಾಗೃಹ ಶಿಕ್ಷೆ, ರೂ. ೧೦ ಸಾವಿರ ದಂಡ ಹಾಗೂ ೨೮೩ ಐಪಿಸಿಗೆ ರೂ.೨೦೦ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿ ಆದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Related Posts
Add A Comment