ವಿಜಯಪುರ: ತಿಕೋಟಾ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಮುಂಚೆ ವಿಜಯಪುರ ಜಿಲ್ಲೆಯ ತಿಕೋಟಾ ಹೊರತು ಪಡಿಸಿ ಉಳಿದ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸತತವಾಗಿ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ತಿಕೋಟಾ ತಾಲೂಕಿನಲ್ಲಿ ಎದುರಾಗಿರುವ ಬರ ಬರ ಪರಿಸ್ಥಿತಿ ಕುರಿತು ಅಗತ್ಯ ದಾಖಲೆಗಳ ಸಮೇತ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೇ, ಬರಪೀಡಿತ ತಾಲೂಕು ಘೋಷಣೆಗೆ ಪರಿಗಣಿಸಲಾಗುವ ಮಾನದಂಡಗಳಿಗೆ ತಿಕೋಟಾ ತಾಲೂಕು ಅರ್ಹವಾಗಿರುವ ಕುರಿತು ಗಮನ ಸೆಳೆದಿದ್ದರು. ಮುಂಗಾರು ಹಂಗಾಮಿನಲ್ಲಿ ಕೇವಲ ಒಂದು ತಿಂಗಳು ವಾಡಿಕೆಗಿಂತ ಸ್ವಲ್ಪ ಹೆಚ್ಚಿನ ಮಳೆಯಾಗಿದ್ದು ಉಳಿದ ಅವಧಿಯಲ್ಲಿ ಮಳೆಯ ಕೊರತೆಯಾಗಿರುವ ಕುರಿತು ದಾಖಲೆ ಸಮೇತ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದರು. ಅಲ್ಲದೇ, ಮಳೆಯ ಕೊರತೆಯಿಂದ ಬಿತ್ತನೆ, ಸಧ್ಯದ ಬೆಳೆಯ ಪರಿಸ್ಥಿತಿ, ಅಂತರ್ಜಲಮಟ್ಟ ಕುಸಿತ, ತೇವಾಂಶ ಕೊರತೆ, ಇದರಿಂದ ಕೃಷಿ ಮತ್ತು ತೋಟಗಾರಿಕೆ ಪ್ರದೇಶದ ಮೇಲಾಗಿರುವ ಪರಿಣಾಮಗಳ ಕುರಿತು ಜಿಲ್ಲಾಡಳಿತದಿಂದ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರು.
ಈಗ ಈ ಎಲ್ಲ ಅಂಶಗನ್ನು ಪರಿಗಣಿಸಿ ರಾಜ್ಯ ಸರಕಾರ ತಿಕೋಟಾ ತಾಲೂಕನ್ನು ಬರಪೀಡಿತ ತಾಲೂಕು ಎಂದು ಪರಿಗಣಿಸಿ ಆದೇಶ ಹೊರಡಿಸಿದೆ. ಇದರಿಂದ ಬರ ನಿರ್ವಹಣೆ ಕಾರ್ಯಕ್ರಮ ಕೈಗೊಳ್ಳಲು ಅನುಕುಲವಾಗಲಿದೆ. ಬರ ಘೋಷಣೆಯಿಂದಾಗಿ ಸಚಿವ ಎಂ. ಬಿ. ಪಾಟೀಲ ಅವರ ಸತತ ಪ್ರಯತ್ನ ಈಗ ಫಲಪ್ರದವಾಗಿದೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Related Posts
Add A Comment