ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ
ಆ ಮನೆಯ ಮಗು ಒಂದೇ ಸಮನೆ ರಚ್ಚೆ ಹಿಡಿದು ಅಳುತ್ತಿತ್ತು. ಹಡೆದ ತಾಯಿ ಕಂಗಾಲಾಗಿದ್ದರೆ, ಅವಳ ತಾಯಿ ಹಸುಗೂಸಿನ ಅಳುವಿಗೆ ಏನು ಮಾಡಬೇಕೆಂದು ತೋಚದೆ ಕಾಲು ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದಳು. ಮೂಲೆಯಲ್ಲಿ ಎಲೆ ಅಡಿಕೆ ಮೆಲ್ಲುತ್ತಾ ಕುಳಿತಿದ್ದ ಪಕ್ಕದ ಮನೆಯ ಅಜ್ಜಿ … ಅಯ್ಯ ಹಾಲು ಕುಡಿದು ಜೀರ್ಣ ಆಗಿಲ್ಲ ಕೂಸಿಗೆ… ಒಂದೀಟು ಅಜ್ವಾನ ತಿಂದು ಕೂಸಿನ ಹೊಟ್ಟೆ ಮೇಲೆ ಊದು ಎಂದು ಹೇಳಿದಳು. ಕೂಡಲೇ ಎಚ್ಚೆತ್ತ ಕೂಸಿನ ಅಜ್ಜಿ ಅಡುಗೆ ಮನೆಯಲ್ಲಿದ್ದ ಅಜ್ವಾನದ ಡಬ್ಬದಿಂದ ಮೂರು ಬೆರಳಿಗೆ ಬರುವಷ್ಟು ಅಜಿವಾನವನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿಂದು ಮಗುವಿನ ಹೊಕ್ಕುಳಿನ ಬಳಿ ಜೋರಾಗಿ
ಊದಿದಳು. ಒಂದೆರಡು ನಿಮಿಷಗಳಲ್ಲಿ ಮಗುವಿನ ಅಳು ಶಾಂತವಾಗಿ ನಂತರ ನಿದ್ರಿಸಲಾರಂಭಿಸಿತು. ಅಚ್ಚರಿಯೇನಲ್ಲ..
ನಮ್ಮ ಅಡುಗೆ ಮನೆಯಲ್ಲಿಯೇ ನಮ್ಮ ಅಜೀರ್ಣತೆಗೆ ಬೇಕಾದ ಹಲವಾರು ಮನೆ ಮದ್ದುಗಳಿವೆ, ಜೀರಿಗೆ, ಅಜಿವಾನ ಶುಂಠಿ, ಮಜ್ಜಿಗೆ ಇನ್ನೂ ಹತ್ತು ಹಲವು.
ಕೆಲವೆಡೆ ಓಂ ಕಾಳು ಎಂದು ಕೂಡ ಕರೆಯಲ್ಪಡುವ ಅಜಿವಾನ, ಗ್ರಾಮೀಣ ಭಾಷೆಯಲ್ಲಿ ಅಜ್ವಾನವೂ ಹೌದು. ಹಲವಾರು ರೋಗಗಳು ಹಾಗೂ ಸೋಂಕುಗಳನ್ನು ಗುಣ ಮಾಡುವ ವಿಶಿಷ್ಟತೆಗಳನ್ನು ಇದು ಹೊಂದಿರುವುದರಿಂದ ಆಯುರ್ವೇದದಲ್ಲಿ ಬಹಳ ಪ್ರಮುಖ ಸ್ಥಾನವನ್ನು ಪಡೆದುಕೊಂಡಿವೆ.
ಮಿರ್ಚಿ ಅಥವಾ ಮೆಣಸಿನ ಕಾಯಿ ಬಜ್ಜಿ, ಬದನೆಕಾಯಿ ಬೋಂಡ, ಈರುಳ್ಳಿ ಪಕೋಡ ಹೀಗೆ ಯಾವುದೇ ಕರಿದ ತಿಂಡಿಗಳಿಗೆ ಅಜಿವಾನವನ್ನು ಕಡ್ಡಾಯವಾಗಿ ಹಾಕುತ್ತಾರೆ. ಕಾರಣವಿಷ್ಟೇ ಹಸಿ ಕಡಲೆಬೇಳೆ ಹಿಟ್ಟಿನ ಸೇವನೆಯಿಂದ ಉಂಟಾಗಬಹುದಾದ ವಾಯು ಬಾಧೆಯನ್ನು ತಡೆಯಲು ಅಜ್ವಾನ ಪರಿಣಾಮಕಾರಿ.
ಬೇಸಿಗೆಯಲ್ಲಿ ಮನೆ ಮನೆಗಳಲ್ಲಿ ಸೇವಿಸುವ ಮಜ್ಜಿಗೆಯಲ್ಲಿ ಕೂಡ ಅಜ್ವಾನ ಮತ್ತು ಜೀರಿಗೆ ಅವಶ್ಯಕ ಸಾಮಗ್ರಿಗಳು. ಇವೆರಡು ವಸ್ತುಗಳು ಇಲ್ಲದ ಮಜ್ಜಿಗೆಯನ್ನು ಊಹಿಸುವುದು ಕಷ್ಟ. ಹಲವಾರು ಜನ ಪ್ರತಿದಿನ ಮುಂಜಾನೆ ಅಜ್ವಾನದ ನೀರನ್ನು ಕುಡಿಯುತ್ತಾರೆ. ಇನ್ನೂ ಕೆಲವರು ರಾತ್ರಿಯೇ ನೀರಿನಲ್ಲಿ ಅಜ್ವಾನ ಮತ್ತು ಜೀರಿಗೆಯನ್ನು ನೆನೆಹಾಕಿ ಮುಂಜಾನೆ ಆ ನೀರನ್ನು ಕುದಿಸಿ ತಣಿಸಿ ಕುಡಿಯುತ್ತಾರೆ. ಇದು ತೂಕ ಇಳಿಸಲು ಕೂಡ ಸಹಾಯಕಾರಿ.
ಟ್ರ್ಯಾಕಿಸ್ಪರ್ಮಾಮ್ ಎನ್ನುವ ಗಿಡಮೂಲಿಕೆಗಳ ಜಾತಿಗೆ ಸೇರಿದ ಓಂ ಕಾಳುಗಳು ಭಾರತೀಯರ ಅಡುಗೆಮನೆಗಳಲ್ಲಿ ಹಾಗೂ ಮಸಾಲೆ ಪದಾರ್ಥಗಳಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಓಂ ಕಾಳುಗಳನ್ನು ಅಜ್ವೈನ್ ಎಂದು ಕರೆಯಲಾಗುತ್ತದೆ. ಈ ಬೀಜಗಳ ಬಣ್ಣವು ಹಸಿರು ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ. ಭಾರತದ ಹಲವಾರು ಅಡುಗೆಗಳಲ್ಲಿ ಉಪ್ಪಿನಕಾಯಿ ಸಾಂಬಾರುಗಳು, ಗೊಜ್ಜುಗಳು ಹಾಗೂ ದಾಲ್ ಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ಭಾರತ ಪಾಕಿಸ್ತಾನ ಅಫ್ಘಾನಿಸ್ತಾನ ಮತ್ತು ಇರಾನ ದೇಶಗಳಲ್ಲಿ ಅಜಿವಾನವನ್ನು ಬೆಳೆಯುತ್ತಾರೆ. ಹಲವಾರು ಸಂಶೋಧನೆಗಳ ಪ್ರಕಾರ ಜೀರ್ಣಕ್ರಿಯೆಯ ವಿವಿಧ ಅಂಗಗಳಾದ ಹೊಟ್ಟೆ, ಕರುಳು ಹಾಗೂ ಅನ್ನನಾಳಗಳಲ್ಲಿ ಉಂಟಾದ ಹುಣ್ಣುಗಳನ್ನು ಈ ಕಾಳುಗಳು ವಾಸಿ ಮಾಡಬಲ್ಲವು.
ಅಜಿವಾನವನ್ನು ಸತತವಾಗಿ ಬಳಸುವುದರಿಂದ ಆಗುವ ಉಪಯೋಗಗಳು
*ದೇಹದಲ್ಲಿ ಆಹಾರದ ಚಯಾಪಚಯ ಕ್ರಿಯೆಗಳನ್ನು ಹೆಚ್ಚಿಸುತ್ತದೆ ಮತ್ತು ಇದರಿಂದ ಉತ್ತಮ ಜೀರ್ಣಶಕ್ತಿಯನ್ನು ಹೊಂದಬಹುದು.
*ಹೊಟ್ಟೆಯಲ್ಲಿ ಅಸುರಕ್ಷಿತ ಆಹಾರದಿಂದ ಉತ್ಪನ್ನವಾಗುವ ಸೋಂಕುಗಳ ವಿರುದ್ಧ ಹೋರಾಡುತ್ತದೆ.
- ದೇಹದಲ್ಲಿಯ ಹೆಚ್ಚುವರಿ ಕೊಬ್ಬಿನ ಅಂಶವನ್ನು ತೆಗೆದುಹಾಕಲು ಅಜ್ವಾನದ ಬಳಕೆ ಅತ್ಯಂತ ಅವಶ್ಯಕವಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವಲ್ಲಿ ಅಜಿವಾನ ಅತ್ಯಂತ ಉಪಯುಕ್ತ.
*ಕ್ಯಾನ್ಸರ್ ಗೆ ಕಾರಣವಾಗುವ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ನಾಶಪಡಿಸುತ್ತದೆ. - ಕಫ ಮತ್ತು ಕೆಮ್ಮು ನಿವಾರಣೆಗೆ ಅಜ್ವಾನದ ಬಳಕೆ ಅತ್ಯಂತ ಸೂಕ್ತ
- ಅಜ್ವಾನದ ನಿಯಮಿತ ಬಳಕೆಯಿಂದ ಶ್ವಾಸಕೋಶದಲ್ಲಿ ಹೆಚ್ಚಿನ ಪ್ರಮಾಣದ ವಾಯುವಿನ ಸೇವನೆಗೆ ಅನುಕೂಲವಾದ ವಾತಾವರಣ ನಿರ್ಮಾಣವಾಗುತ್ತದೆ.
- ಅಜೀರ್ಣ, ಉಬ್ಬರ, ಕಸಿವಿಸಿ, ವಾಯು ಬಾಧೆ ಮತ್ತು ಹುಳಿ ತೇಗಿನಂತಹ ಸಮಸ್ಯೆಗಳಿಗೆ ಅಜಿವಾನ ಪರಿಣಾಮಕಾರಿ ಔಷಧ.
- ಆಹಾರ ಸೇವನೆಯಿಂದ ದೇಹದಲ್ಲಿ ಹೆಚ್ಚಾಗುವ ಉಪ್ಪಿನ ಅಂಶವನ್ನು ತೆಗೆದುಹಾಕುವಲ್ಲಿ ಅಜಿವಾನ ಪರಿಣಾಮಕಾರಿ ಔಷಧವಾಗಿ ಪರಿಣಮಿಸುತ್ತದೆ. ಹೆಚ್ಚಿನ ನೀರನ್ನು ಕೂಡ ತೆಗೆದು ಹಾಕುತ್ತದೆ.
ಮೂಲವ್ಯಾಧಿಯ ತೊಂದರೆ ಇರುವವರಿಗೆ ಅಜೀವಾನ ಸಿದ್ದ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ.
*ಅಜ್ವಾನದ ಕಾಳುಗಳನ್ನು ಕುಟ್ಟಿ ಪುಡಿಮಾಡಿ ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದ ಗರ್ಭಿಣಿ ಮಹಿಳೆಯರಿಗೆ ಉಂಟಾಗುವ ಸಮಸ್ಯೆಗಳು ಹಾಗೂ ಸಾಮಾನ್ಯ ಮಹಿಳೆಯರಲ್ಲಿ ಉಂಟಾಗುವ ಋತುಚಕ್ರದ ಏರುಪೇರುಗಳನ್ನು ಸರಿ ಮಾಡಿಕೊಳ್ಳಬಹುದು. ಈ ಕಾಳುಗಳನ್ನು ಸ್ವಲ್ಪ ಹುರಿದು ನಂತರ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಸೋಸಿ ಕುಡಿಯಬಹುದು.
*ಹೊಟ್ಟೆ ಹಸಿದಿಲ್ಲ ಎಂದು ಹೇಳುವವರಿಗೆ ಕೂಡ ಅಜ್ವಾನದ ನೀರನ್ನು ಕುಡಿಸುತ್ತಾರೆ.
*ಆರ್ಥ್ರೈಟಿಸ್ ನಿಂದ ಉಂಟಾದ ಮೂಳೆಗಳ ಬಳಿ ಇರುವ ಕೆಂಪು ಕಲೆಗಳು ಹಾಗೂ ನೋವನ್ನು ಇದು ಹೋಗಲಾಡಿಸುತ್ತದೆ. ಅಜ್ವಾನದ ಕಾಳುಗಳಲ್ಲಿ ಉರಿಯೂತಗಳನ್ನು ಶಮನ ಮಾಡುವ ಗುಣಗಳಿವೆ. ಆರ್ಥ್ರೈಟಿಸ್ ನಿಂದ ಉಂಟಾಗಿರುವ ಮೂಳೆಗಳ ಊತವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.
ಹೀಗೆ ಬಹುಪಯೋಗಿಯಾಗಿರುವ ಅಜ್ವಾನವನ್ನು ಎಲೆ ಅಡಿಕೆಯ ತಟ್ಟೆಯಲ್ಲಿ ಕೂಡ ಇಡುತ್ತಾರೆ. ಭಾರಿ ಭೋಜನದಿಂದ ಭಾರವಾದ ಹೊಟ್ಟೆಯ ಯೋಗಕ್ಷೇಮ ವಿಚಾರಿಸಿಕೊಳ್ಳಲು ಮತ್ತು ಹೊಟ್ಟೆಯ ಉಬ್ಬರವನ್ನು ತಡೆಯಲು ಅಜ್ವಾನ ಇದ್ದೇ ಇರಲಿ ಎಲ್ಲರ ಮನೆಯಲ್ಲಿ.