ಒಳಚರಂಡಿ ನಿರ್ವಹಣೆಗೆ ಹೈಟೆಕ್ ಸ್ಪರ್ಶ | ನೂತನ ವಾಹನಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ | ₹40 ಲಕ್ಷ ವೆಚ್ಚದಲ್ಲಿ ಖರೀದಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಇಂಡಿ ನಗರಸಭೆಯ ವತಿಯಿಂದ ಸುಮಾರು ₹40 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಒಳಚರಂಡಿ ಸ್ವಚ್ಛಗೊಳಿಸುವ ನೂತನ ಯಂತ್ರ ಅಳವಡಿತ ವಾಹನಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದರು.
ನಗರದ ಒಳಚರಂಡಿ ವ್ಯವಸ್ಥೆಯ ಸಮರ್ಪಕ ನಿರ್ವಹಣೆ, ಸ್ವಚ್ಛತಾ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವುದು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಈ ನೂತನ ವಾಹನ ಮಹತ್ವದ ಪಾತ್ರ ವಹಿಸಲಿದೆ.
ಇಂಡಿ ನಗರ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರ ಮುಂದಾಲೋಚನೆಯ ಫಲವಾಗಿ ನಗರದ ಸ್ವಚ್ಛತೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ನಗರಸಭೆ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಮುಂದಾಗಿದೆ. ನೂತನ ಯಂತ್ರದ ಬಳಕೆಯಿಂದ ಒಳಚರಂಡಿಗಳಲ್ಲಿನ ತ್ಯಾಜ್ಯ ಹಾಗೂ ಕೊಳಚೆ ತೆರವು ಕಾರ್ಯ ಸುಗಮವಾಗುವುದರ ಜತೆಗೆ ಸ್ವಚ್ಛತಾ ಸಿಬ್ಬಂದಿಯ ಕೆಲಸದ ಒತ್ತಡವೂ ಕಡಿಮೆಯಾಗಲಿದೆ. ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಕಾರ್ಯಾಚರಣೆ ಕೈಗೊಳ್ಳಲು ಅನುಕೂಲವಾಗಲಿದೆ.
ನಗರದ ಸ್ವಚ್ಛತೆ, ನೈರ್ಮಲ್ಯ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಧುನಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಒಳಚರಂಡಿ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವ ಈ ಕ್ರಮ ನಗರಕ್ಕೆ ಉಪಯುಕ್ತವಾಗಲಿದೆ.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ, ನಗರಸಭೆ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

