ಉದಯರಶ್ಮಿ ದಿನಪತ್ರಿಕೆ
ಅಥಣಿ: ಎಚ್ಐವಿ ಸೋಂಕಿನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ಬೆಳಗಾವಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಅಥಣಿ ಹಾಗೂ ಎಸ್ಎಸ್ಎಂಎಸ್ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ೫ ರಂದು ಎಚ್ಐವಿ ಜಾಗೃತಿ ಅಭಿಯಾನ ಹಾಗೂ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಅಧಿಕಾರಿ ಡಾ. ಬಿ.ಜಿ. ಕಾಗೆ ಉದ್ಘಾಟಿಸಿದರು.
ಬಳಿಕ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಅಥಣಿಯ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಹಳಿಯಾಳ ವೃತ್ತ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಎಚ್ಐವಿ ಸೋಂಕಿನ ಹರಡುವಿಕೆ, ತಡೆಗಟ್ಟುವ ಕ್ರಮಗಳು, ಮುನ್ನೆಚ್ಚರಿಕೆ ಹಾಗೂ ಸೋಂಕಿತರ ಬಗ್ಗೆ ಸಮಾಜದಲ್ಲಿರಬೇಕಾದ ಜವಾಬ್ದಾರಿಯುತ ಮನೋಭಾವದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಗೀತಾ ಕೊಡತೆ, ಘಟಕ ವ್ಯವಸ್ಥಾಪಕ ಜಗದಾಳೆ, ಎಸ್ಎಸ್ಎಂಎಸ್ ಮಹಾವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಕೆ.ಎಂ. ಅಚ್ಚುತಾನಂದ, ಆನಂದ ಸೊಳಸಿ, ಯುವ ರೆಡ್ಕ್ರಾಸ್ ಘಟಕದ ಅಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಎಂ., ಐಸಿಟಿಸಿ ಆಪ್ತ ಸಮಾಲೋಚಕರಾದ ಶಂಕ್ರಯ್ಯ ಬಿ. ಮಠಪತಿ, ಎಆರ್ಟಿ ಆಪ್ತ ಸಮಾಲೋಚಕರಾದ ಬಸವರಾಜ ಮುದಿಗೌಡರ, ಶಕ್ತಿ ಟಿಐ ಎನ್ಜಿಒ ಪ್ರತಿನಿಧಿಗಳು ಹಾಗೂ ಸಂಪರ್ಕ ಕಾರ್ಯಕರ್ತರು ಉಪಸ್ಥಿತರಿದ್ದರು. ಎನ್ಎಸ್ಎಸ್ ಸ್ವಯಂಸೇವಕರು ಬೀದಿ ನಾಟಕದ ಮೂಲಕ ನೀಡಿದ ಆರೋಗ್ಯ ಜಾಗೃತಿ ಸಂದೇಶ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೆ, ಎಚ್ಐವಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಅಭಿಯಾನ ಯಶಸ್ವಿಯಾಯಿತು.

