ಕೋರವಾರ ಗ್ರಾಮದಲ್ಲಿ ಆಯೋಜಿಸಿದ್ದ ಕೋರವಾರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಕ್ಕಳ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಅಂತಹ ಶೈಕ್ಷಣಿಕ ಕಾರ್ಯಕ್ರಮಗಳು ಮಗುವಿನ ಭವಿಷ್ಯದ ದೃಷ್ಟಿಯಿಂದ ತುಂಬಾ ಉತ್ತಮ ವೇದಿಕೆಗಳಾಗಿವೆ ಎಂದು ಶೇಖರಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದ ಮಾನಸಾ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದ ಕೋರವಾರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶರವೇಗದಲ್ಲಿ ಬೆಳೆಯುತ್ತಿರುವ ಇಂದಿನ ಪ್ರಪಂಚದಲ್ಲಿ ಇಂತಹ ಪ್ರತಿಭಾ ಅನ್ವೇಷಣೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ ಎಂದರು.
ಗ್ರಾಮದ ಹಿರಿಯ ಮುಖಂಡ ರಾಜಶೇಖರ ಛಾಯಾಗೋಳ ಮಾತನಾಡಿ, ಗ್ರಾಮೀಣ ಪ್ರದೇಶಗಳ ಬಡಮಕ್ಕಳನ್ನು ಸ್ಪರ್ಧಾತ್ಮಕವಾಗಿ ತಯಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಕರ ಹೊರೆಯನ್ನು ಕಡಿಮೆ ಮಾಡಿ ಗುಣಮಟ್ಟದ ಹಾಗೂ ಅತ್ಯಾಧುನಿಕ ಕಲಿಕೆಗೆ ಅವಕಾಶ ನೀಡಬೇಕು ಎಂದರು.
ಕೋರವಾರದ ಸಮೂಹ ಸಂಪನ್ಮೂಲ ವ್ಯಕ್ತಿ ಬಾಬು ನಡುವಿನಕೇರಿ ಹಾಗೂ ಶಿಕ್ಷಕ ಅರುಣ ಕೋರವಾರ ಮಾತನಾಡಿದರು.
ನಂತರ ದಿನಪೂರ್ತಿ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತ ಮಕ್ಕಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಸ್ಥಳೀಯ ಮಾನಸಾ ಶಾಲೆಯ ಅಧ್ಯಕ್ಷೆ ಭೀಮಬಾಯಿ ಸೋಲಂಕರ, ಕೆಬಿಎಂಪಿಎಸ್ ಕೋರವಾರ ಶಾಲೆಯ ಮುಖ್ಯಶಿಕ್ಷಕಿ ಬಿ.ಬಿ.ಅಗ್ನಿ, ನಿವೃತ್ತ ಮುಖ್ಯಶಿಕ್ಷಕ ಬಸವರಾಜ ಬಿರಾದಾರ, ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜ ನಾಗರಾಳ, ಕೊಕಟನೂರ ಶಾಲೆಯ ಎಂ.ಎಂ.ಮೋಮಿನ, ಪ್ರೇಮಸಿಂಗ ಚವ್ಹಾಣ, ಬಿ.ಎಸ್.ಬೆಳ್ಳುಂಡಗಿ, ಅಶೋಕ ನಾಯ್ಕೋಡಿ ಸೇರಿದಂತೆ ಕೋರವಾರ ಕ್ಲಸ್ಟರಿನ ಶಿಕ್ಷಕರು, ಮಕ್ಕಳು ಇದ್ದರು.

