9 ವರ್ಷಗಳಲ್ಲಿ 66 ಕ್ರಿಮಿನಲ್ ಪ್ರಕರಣಗಳು ದಾಖಲು; ‘MAD’, ‘MD’ ಹೆಸರಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕೃತ್ಯ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಕುಖ್ಯಾತ ರೌಡಿ ಮಾಳಪ್ಪ ಬಿನ್ ಅಮಸಿದ್ದ ದೇವಕತೆ (30) ವಿರುದ್ಧ ಕರ್ನಾಟಕ ಗೂಂಡಾ ಕಾಯ್ದೆಯಡಿ ಹೊರಡಿಸಲಾಗಿದ್ದ ಬಂಧನ ಆದೇಶವನ್ನು ರಾಜ್ಯ ಸರ್ಕಾರ ಒಂದು ವರ್ಷದ ಅವಧಿಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಇಂಡಿ ತಾಲ್ಲೂಕಿನ ಕ್ಯಾತನಕೇರಿ ಗ್ರಾಮದ ನಿವಾಸಿಯಾದ ಮಾಳಪ್ಪ ದೇವಕತೆ ವಿರುದ್ಧ ವಿಜಯಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಕರ್ನಾಟಕ ಗೂಂಡಾ ಕಾಯ್ದೆ-1985ರ ಕಲಂ 3(1) ಮತ್ತು 3(2)ರ ಅಡಿಯಲ್ಲಿ 2026ರ ಸೆ.25ರಂದು ಬಂಧನ ಆದೇಶ ಹೊರಡಿಸಿದ್ದರು. ಈ ಆದೇಶಕ್ಕೆ ಅ.5ರಂದು ಸರ್ಕಾರ ಅನುಮೋದನೆ ನೀಡಿತ್ತು. ನಂತರ ಕಾಯ್ದೆಯ ಕಲಂ 9ರ ಅಡಿಯಲ್ಲಿ ರಚಿಸಲಾದ ಸಲಹಾ ಮಂಡಳಿಯು ನ.3ರಂದು ವರದಿ ಸಲ್ಲಿಸಿ, ಮಾಳಪ್ಪನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟಿತ್ತು. ಈ ವರದಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರ, ಕಾಯ್ದೆಯ ಕಲಂ 12(1)ರಡಿ ಬಂಧನ ಆದೇಶವನ್ನು ಸ್ಥಿರೀಕರಿಸಿ, ಕಲಂ 13ರ ಅನ್ವಯ ಸೆ.25, 2026ರಿಂದ ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಸಲು ಆದೇಶಿಸಿದೆ.
ಒಂಬತ್ತು ವರ್ಷಗಳಲ್ಲಿ 66 ಪ್ರಕರಣಗಳು
ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ, ಮಾಳಪ್ಪ ದೇವಕತೆ ತನ್ನ 21ನೇ ವಯಸ್ಸಿನಿಂದಲೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಕಳೆದ ಒಂಬತ್ತು ವರ್ಷಗಳಲ್ಲಿ ಆತನ ವಿರುದ್ಧ ಕೊಲೆ, ಕೊಲೆಯತ್ನ, ಮಾರಣಾಂತಿಕ ಹಲ್ಲೆ, ದೊಂಬಿ, ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ ಸೇರಿದಂತೆ ಒಟ್ಟು 66 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ತನ್ನ ತಂದೆಯ ಹೆಸರಿನ ಹಾಗೂ ಅಡ್ಡಹೆಸರಿನ ಮೊದಲ ಮೂರು ಅಕ್ಷರಗಳನ್ನು ಸೇರಿಸಿ ‘MAD’ ಮತ್ತು ‘MD’ (ಮಾಲು ದಾದಾ) ಹೆಸರಿನಲ್ಲಿ ರೌಡಿ ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಹೊರ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರೌಡಿಸಂ ಪ್ರದರ್ಶನ
ಸಹಚರರೊಂದಿಗೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್‌ಗಳಲ್ಲಿ ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡಿರುವ ಛಾಯಾಚಿತ್ರಗಳನ್ನು ಪ್ರಕಟಿಸಿ, ರೌಡಿ ಗ್ಯಾಂಗ್‌ನ ನಾಯಕನಂತೆ ಬಿಂಬಿಸಿಕೊಳ್ಳುವ ಮೂಲಕ ರೌಡಿಸಂ ವೈಭವೀಕರಿಸುತ್ತಿದ್ದಾನೆ ಎಂದು ಜಿಲ್ಲಾಡಳಿತದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಚಟುವಟಿಕೆಗಳು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಸಮಾಜದ ಸ್ವಾಸ್ಥ್ಯ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಡಲಾಗಿದೆ.
ಈತನ ವಿರುದ್ಧ ಈ ಹಿಂದೆ ಹಲವು ಬಾರಿ ಬಂಧನ, ಮುಂಜಾಗ್ರತಾ ಕ್ರಮಗಳು ಹಾಗೂ ರೌಡಿ ಹಾಳೆ ನಿರ್ವಹಣೆ ಸೇರಿದಂತೆ ವಿವಿಧ ಕಾನೂನು ಕ್ರಮಗಳನ್ನು ಕೈಗೊಂಡಿದ್ದರೂ ಅಪರಾಧ ಚಟುವಟಿಕೆಗಳು ಮುಂದುವರಿದಿವೆ. ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಸ್ವಂತ ಗ್ಯಾಂಗ್ ಕಟ್ಟಿಕೊಂಡು ಸಂಘಟಿತವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದರಿಂದ ಸಾಮಾನ್ಯ ಕಾನೂನು ಕ್ರಮಗಳಿಂದ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಗೂಂಡಾ ಕಾಯ್ದೆಯಡಿ ಬಂಧನ ಮುಂದುವರಿಸುವುದು ಅಗತ್ಯವೆಂದು ಸರ್ಕಾರ ನಿರ್ಧರಿಸಿದೆ. ಸದ್ಯ ಮಾಳಪ್ಪ ದೇವಕತೆ ಮಂಗಳೂರು ಕಾರಾಗೃಹದಲ್ಲಿ ಬಂಧನದಲ್ಲಿದ್ದಾನೆ.

