ಮಹಿಳಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಸ್ನಾತಕ ವಿಭಾಗದ ಸಂಯೋಜಕ ಡಾ. ಅಕ್ಷಯ ಯಾರ್ದಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಣದ ಜೊತೆಗೆ ಸಂವಹನ, ಮಾತುಗಾರಿಕೆ ಹಾಗೂ ನಿರೂಪಣೆಯಂತಹ ಪ್ರಾಯೋಗಿಕ ಕೌಶಲಗಳನ್ನು ಬೆಳೆಸಿಕೊಂಡರೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ಮಹಿಳಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಸ್ನಾತಕ ವಿಭಾಗದ ಸಂಯೋಜಕ ಡಾ. ಅಕ್ಷಯ ಯಾರ್ದಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಸ್ನಾತಕ ವಿದ್ಯಾರ್ಥಿನಿಯರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ಟೆಲಿವಿಷನ್ ನಿರೂಪಣೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಸಂವಹನ ಕೌಶಲ, ಮಾತುಗಾರಿಕೆ, ಸುದ್ದಿ ನಿರೂಪಣೆ ಹಾಗೂ ವರದಿಗಾರಿಕೆಯಂತಹ ಪ್ರಾಯೋಗಿಕ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಯೂಟ್ಯೂಬ್, ಪಾಡ್ಕಾಸ್ಟ್ ಹಾಗೂ ಸ್ವಂತ ಮಾಧ್ಯಮ ವೇದಿಕೆಗಳ ಮೂಲಕ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಉತ್ತಮ ಅವಕಾಶಗಳಿವೆ. ವಿಶ್ವವಿದ್ಯಾಲಯದಲ್ಲಿರುವ ಸುಸಜ್ಜಿತ ಸ್ಟುಡಿಯೋ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಇಂತಹ ಕಾರ್ಯಾಗಾರಗಳ ಮೂಲಕ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಬೇಕು ಎಂದರು.
ಸ್ನಾತಕ ವಿಭಾಗದ ವಾಣಿಜ್ಯ ನಿಕಾಯದ ಸಂಯೋಜಕ ಡಾ. ಗಣೇಶ್ ಎ.ಆರ್. ಮಾತನಾಡಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಮಾನವೀಯ ಭಾವನೆಗಳು ಹಾಗೂ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸುವ ಸಾಮರ್ಥ್ಯವನ್ನು ತಂತ್ರಜ್ಞಾನ ಸಂಪೂರ್ಣವಾಗಿ ಒದಗಿಸಲು ಸಾಧ್ಯವಿಲ್ಲ. ನಿರೂಪಣೆಯಲ್ಲಿ ಕೇವಲ ಸ್ಕಿçÃಪ್ಟ್ ಓದುವುದಷ್ಟೇ ಮುಖ್ಯವಲ್ಲ. ಅನಿರೀಕ್ಷಿತ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವ ಕೌಶಲವೂ ಅಗತ್ಯ. ವಿದ್ಯಾರ್ಥಿನಿಯರು ಉತ್ತಮ ಸಂವಹನ, ಮಾತುಗಾರಿಕೆ ಹಾಗೂ ನಿರೂಪಣಾ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಾಗಾರಗಳು ಪ್ರಾಯೋಗಿಕ ಜ್ಞಾನ ಪಡೆಯಲು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನ ಕೋಲಾರ್ ಮಾತನಾಡಿ, ನಿರೂಪಣೆಗೆ ಕೇವಲ ವಿಷಯ ಜ್ಞಾನವಿದ್ದರೆ ಸಾಲದು. ಆತ್ಮವಿಶ್ವಾಸ, ಭಾವನೆಗಳ ಅಭಿವ್ಯಕ್ತಿ ಹಾಗೂ ದೇಹಭಾಷೆಯೂ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿನಿಯರು ತಮ್ಮಲ್ಲಿರುವ ಜ್ಞಾನವನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಕೌಶಲ ಬೆಳೆಸಿಕೊಳ್ಳಬೇಕು. ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ಟುಡಿಯೋದಲ್ಲಿ ಪ್ರಾಯೋಗಿಕ ತರಬೇತಿ ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಶೋಧನಾ ವಿದ್ಯಾರ್ಥಿನಿಯರಾದ ಪವಿತ್ರಾ ಕಂಬಾರ ವಂದಿಸಿದರು, ಜಯಶ್ರೀ ತಳವಾರ ನಿರೂಪಿಸಿದರು.

