ತಮ್ಮ ಮೂರು ತಿಂಗಳ ಸಂಬಳದಲ್ಲಿ, ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಶೈಕ್ಷಣಿಕ ಪ್ರವಾಸ ಭಾಗ್ಯ ಕಲ್ಪಿಸಿಕೊಟ್ಟ ಮುಖ್ಯ ಗುರು ವಿಠ್ಠಲ ಭೈರಗೊಂಡ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ತಮ್ಮ ಮೂರು ತಿಂಗಳ ಸಂಬಳದಲ್ಲಿ, ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಶೈಕ್ಷಣಿಕ ಪ್ರವಾಸ ಭಾಗ್ಯ ಕಲ್ಪಿಸಿಕೊಟ್ಟಿದ್ದಾರೆ.
ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದ ಮೂಲಕ ವಿದ್ಯಾರ್ಥಿಗಳನ್ನು ದೆಹಲಿ ಪ್ರವಾಸ ಹಮ್ಮಿಕೊಳ್ಳುವ ಮೂಲಕ ಇಡೀ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ ಸಿಕ್ಕಂತಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಳೆ ದೂಳಖೇಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಠ್ಠಲ ಭೈರಗೊಂಡ ಇವರು ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 2-3 ಲಕ್ಷರೂ. ಖರ್ಚು ಮಾಡಿ ತಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನದಲ್ಲಿ ದೆಹಲಿಗೆ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಇಬ್ಬರು ಸಹಶಿಕ್ಷಕರೊಂದಿಗೆ ಪ್ರವಾಸಕ್ಕೆ ತೆರಳುತ್ತಿರುವ ಭೈರಗೊಂಡ ಶಿಕ್ಷಕರು, ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಸೌಭಾಗ್ಯದಾತಾ ಆಗಿದ್ದಾರೆ.
ನವ್ಹೆಂಬರ್ 13ರಿಂದ ಪ್ರಾರಂಭವಾಗುವ ಶೈಕ್ಷಣಿಕ ಪ್ರವಾಸವೂ ದೆಹಲಿಯ ಪ್ರೇಕ್ಷಣೀಯ ಸ್ಥಳಗಳಾದ ಕುತೂಬ್ ಮಿನಾರ, ರಾಜಘಾಟ, ಕೆಂಪುಕೋಟೆ, ಇಂದಿರಾ ಪ್ಯಾಲೇಸ್, ಇಂಡಿಯಾ ಗೇಟ್ ಸೇರಿದಂತೆ ಇತರೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆ ಇಮ್ಮಡಿಗೊಳಿಸಲಿದ್ದಾರೆ. ನಂತರ ದೆಹಲಿ ಸುತ್ತಮುತ್ತಲಿನ ಆಗ್ರಾದಲ್ಲಿರುವ ತಾಜಮಹಲ್, ಯಮುನಾ ನದಿ, ಪತೇಪೂರ ಸಿಕ್ರಿ, ಮಥೂರಾ ಬೃಂದಾವನ ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. 13ರಂದು ಸೋಲಾಪೂರ ಪುಣೆ ಮಾರ್ಗವಾಗಿ ದೆಹಲಿಗೆ ತೆರಳುವ ಪ್ರವಾಸ ತಂಡ ಸುಮಾರು 4 ದಿನಗಳವರೆಗೆ ಶೈಕ್ಷಣಿಕ ಪ್ರವಾಸದಲ್ಲಿರುತ್ತಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರಯಾಣದ ಮೂಲಕ ಶೈಕ್ಷಣಿಕ ಪ್ರವಾಸ ಮಾಡಿಸುತ್ತಿರುವ ಮಾದರಿ ಶಿಕ್ಷಕ ವಿಠ್ಠಲ ಭೈರಗೊಂಡ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಾಲಕರು, ಸಾರ್ವಜನಿಕರು ಹರ್ಷ ವ್ಯಕ್ತ ಪಡಿಸಿದ್ದಾರೆ.

“ಚಡಚಣ ತಾಲೂಕಿನ ಹಳೆ ದೂಳಖೇಡ ಶಾಲೆಯ ಮುಖ್ಯಗುರು ವಿಠ್ಠಲ ಭೈರಗೊಂಡ ತಮ್ಮ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ವಿಮಾನದ ಮೂಲಕ ಶೈಕ್ಷಣಿಕ ಪ್ರವಾಸ ಮಾಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಡೀ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಇಡೀ ಜಿಲ್ಲೆಯ ಶಿಕ್ಷಕರು ಇವರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇಂತಹ ಕಾರ್ಯ ಸಮಾಜದಲ್ಲಿ ಹೆಚ್ಚಾಗಬೇಕು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈಜೋಡಿಸಬೇಕು.”
– ಹೆಚ್ ನಾಗೇಂದ್ರಪ್ಪ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚಡಚಣ
“ಎಲ್ಲರಂತೆ ನಮ್ಮ ಮಕ್ಕಳಿಗೂ ವಿಮಾನದಲ್ಲಿ ಕುಳಿತುಕೊಳ್ಳುವ ಆಶೆ ಇರುತ್ತದೆ. ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಮಾಡಬೇಕೆಂಬ ಸದುದ್ದೇಶದಿಂದ ಈ ಕಾರ್ಯ ಕೈಕೊಂಡಿರುವೆ. ಇದಕ್ಕೆ ಸಹಶಿಕ್ಷಕರು, ಅಧಿಕಾರಿಗಳು, ಪಾಲಕರ ಅನುಮತಿ ಪಡೆಯಲಾಗಿದೆ.”
– ವಿಠ್ಠಲ ಭೈರಗೊಂಡ
ಮುಖ್ಯ ಗುರು, ಸರ್ಕಾರಿ ಪ್ರಾಥಮಿಕ ಶಾಲೆ, ಧೂಳಖೇಡ

