ವಿಜಯಪುರ: ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಗ್ರಾಮೀಣರಿಗೆ ಅನುಕೂಲ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಗಳನ್ನು ಮಾದರಿ ಗ್ರಾಮ ಪಂಚಾಯತಿಗಳನ್ನಾಗಿಸಲು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಅವರು ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಇತ್ತೀಚಿಗೆ ಬರಗಾಲ ನಿರ್ವಹಣೆ ಕುರಿತು ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಜನರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ಉದ್ಭವಿಸುವ ಸಮಸ್ಯೆಗಳ ಪರಿಹರಿಸಿ ತಮ್ಮ ಗ್ರಾಮದ ಜನರ ಒಳಿತಿಗಾಗಿ ಕಾರ್ಯ ನಿರ್ವಹಿಸಬೇಕು. ಬರ ಇರುವ ಸಂಕಷ್ಟ ಸ್ಥಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಗ್ರಾಮೀಣರಿಗೆ ಅತ್ಯುತ್ತಮ ಯೋಜನೆಯಾಗಿದೆ. ನರೇಗಾ ಯೋಜನೆಯಡಿ ಕೆಲಸ ಕೋರಿ ಸಲ್ಲಿಸುವ ಅರ್ಜಿಗಳಿಗೆ ಆದ್ಯತೆ ನೀಡಿ, ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅರ್ಜಿ ನೀಡಿದ ತಕ್ಷಣವೇ ಅವರಿಗೆ ಕೆಲಸ ಒದಗಿಸಿ ಅವರಿಗೆ ಸಹಾಯ ಮಾಡಿ ಎಂದು ಎಲ್ಲ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ನರೇಗಾ ಯೋಜನೆಯನ್ನು ಅನುಷ್ಠಾನ ಮಾಡುವ ಎಲ್ಲ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯತಿಯೊಂದಿಗೆ ಸಮನ್ವಯ ಸಾಧಿಸಿಕೊಂಡು ಗ್ರಾಮೀಣ ಜನರಿಗೆ ಕೆಲಸ ಒದಗಿಸಬೇಕು ಎಂದರು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ರೈತರಿಗೆ ವೈಯಕ್ತಿಕ ಕಾಮಗಾರಿ ಒದಗಿಸಬೇಕು. ಕೂಲಿ ಕಾರ್ಮಿಕರ ಸಂಖ್ಯಾಧಾರದ ಮೇಲೆ ಸಮುದಾಯ ಕಾಮಗಾರಿಗಳನ್ನು ಆರಂಭಿಸಬೇಕು ಎಂದರು.
ಜನರ ಅಭಿವೃದ್ಧಿಯೇ ಗ್ರಾಮದ ಅಭಿವೃದ್ಧಿ ಎಂದು ಕೆಲಸ ಮಾಡಿ. ಕ್ಲಿಷ್ಟಕರ ಸಂದರ್ಭದಲ್ಲಿ ಅವರ ನೆರವಿಗೆ ನಿಲ್ಲಬೇಕು. ಜನರ ಮನಸ್ಸಿನಲ್ಲಿ ಸದಾ ಕಾಲ ಉಳಿಯುವಂತಹ ಕೆಲಸ ಮಾಡಿ ಎಂದರು. ಗ್ರಾಮೀಣ ಜನರಿಗೆ ಸಹಾಯ ಮಾಡಲು ಮಹಾತ್ಮ ಗಾಂಧಿ ನರೇಗಾ ಯೋಜನೆ ಸೇರಿ ವಿವಿಧ ಯೋಜನೆಗಳಡಿ ಸಾಕಷ್ಟು ಅನುದಾನ ಲಭ್ಯವಿದ್ದು, ಕ್ರಿಯಾಶೀಲತೆ ಮೈಗೂಡಿಸಿಕೊಂಡು ಕಲೆಸ ನಿರ್ವಹಿಸಿ ಎಂದರು. ನೀವು ಕಾರ್ಯ ನಿರ್ವಹಿಸುವ ಗ್ರಾಮ ಪಂಚಾಯತಿಗಳನ್ನು ಮಾದರಿಯಾಗಿಸಲು ಶ್ರಮಿಸಬೇಕಿದೆ ಎಂದರು.
ಶ್ಲಾಘನೆ: ಬಿಜ್ಜರಗಿ,ಚವಡಿಹಾಳ, ಬಬಲಾದಿ, ಝಳಕಿ ಸೇರಿದಂತೆ ಇತರೆ ಹಲವು ಮಾದರಿ ಗ್ರಾಮ ಪಂಚಾಯತಿ ಎನಿಸಿಕೊಂಡಿವೆ. ಜಿಲ್ಲೆಯಲ್ಲಿ ೧೨೦೦ ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಬೆಂಚ್ ವಿತರಣೆ ಮಾಡುವ ಮೂಲಕ ಜಿಲ್ಲೆ ರಾಜ್ಯದಲ್ಲಿಯೇ ಮಾದರಿಯಾಗಿದೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಸಾಧ್ಯವಾಗಿಸಿದೆ.
ಉಪ ಕಾರ್ಯದರ್ಶಿಗಳಾದ ಡಾ.ವಿಜಯಕುಮಾರ ಆಜೂರ ಅವರು ಮಾತನಾಡಿದರು.
ಸಭೆಯಲ್ಲಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಸೇರಿದಂತೆ ಎಲ್ಲ ಅನುಷ್ಠಾನ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಮೂಲಕ ಹಾಜರಿದ್ದರು.
Related Posts
Add A Comment