ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್ ಸಭೆ
ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ನ. ೦೧ಕ್ಕೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ೫ ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದ್ದು, ೧೮ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಮನ್ವಯತೆ ಸಾಧಿಸಲು ಬಿಎಲ್‌ಎಗಳ ನೇಮಕ ಮಾಡಿಕೊಂಡು ಶುದ್ಧ ಅಂತಿಮ ಮತದಾರರ ಪಟ್ಟಿಗೆ ಸಹಕರಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮತದಾರರ ಪಟ್ಟಿಯ ವೀಕ್ಷಕರಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಕ್ಷದ ಬಿಎಲ್‌ಎಗಳನ್ನು ನೇಮಕ ಮಾಡಿಕೊಂಡು ಮುತುವರ್ಜಿ ವಹಿಸಿ ಮತಗಟ್ಟೆ ಮಟ್ಟದಲ್ಲಿ ಮತದಾರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು. ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದುಹಾಕುವುದು, ತಿದ್ದುಪಡಿ ಸೇರಿದಂತೆ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶವಿರುವುದರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಮೂನೆ ೬, ಮತದಾರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ನಮೂನೆ ೭, ಮತದಾರ ಗುರುತಿನ ಚೀಟಿಗೆ ಆಧಾರ ಸಂಖ್ಯೆ ಅಥವಾ ಇತರೆ ದಾಖಲೆಗಳ ಜೋಡಣೆಗೆ ನಮೂನೆ ೬ಬಿ, ಮತದಾರ ಪಟ್ಟಿಯಲ್ಲಿನ ತಿದ್ದುಪಡಿ, ಬದಲಿ ಗುರುತಿನ ಚೀಟಿ, ಮತದಾರರು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಅಥವಾ ಒಂದೇ ವಿಧಾನಸಭಾ ಕ್ಷೇತ್ರದಲ್ಲಿರುವ ಭಾಗಕ್ಕೆ ಸ್ಥಳಾಂತರಕ್ಕೆ ನಮೂನೆ ೮ರಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದಲ್ಲಿ ವಿಜಯಪುರ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್ ಮೊ: ೯೧೧೩೦೪೯೯೫೧ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ : ೨೫-೦೯-೨೦೨೩ರನ್ವಯ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ : ೦೧-೦೧-೨೦೨೪ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ದಿನಾಂಕ : ೨೭-೧೦-೨೦೨೩ ರಿಂದ ೦೯-೧೨-೨೦೨೩ರವರೆಗೆ ಹಕ್ಕು ಮತ್ತು ಆಕ್ಷೇಪಣೆಗೆ ಅವಕಾಶ, ನಂತರ ವಿಶೇಷ ಕ್ಯಾಂಪೇನ್‌ಗಳ ಮೂಲಕ ಮತದಾರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಆನ್‌ಲೈನ್ ಫ್ಲಾಟ್‌ಫಾರ್ಮಗಳಾದ ವಿಎಚ್‌ಎ, ಎನ್‌ವಿಎಸ್‌ಪಿ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಂಪರ್ಕಿಸಿ ಗರುಡ್‌ಆಪ್ ಮೂಲಕವೂ ಕೂಡಾ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯ ಅಂತಿಮ ಶುದ್ಧ ಮತದಾರರ ಪಟ್ಟಿ ಪ್ರಕಟಣೆಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಆಬೀದ್ ಗದ್ಯಾಳ , ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಭೋಗೇಶ ಸೋಲಾಪುರ, ಎಚ್.ಎಷ್.ದಳವಾಯಿ, ನಿತೇಶ ತೊರವಿ, ರಾಜು ಹಿಪ್ಪರಗಿ, ಶರಣಪ್ಪ ಕುಂಬಾರ ಉಪಸ್ಥಿತರಿದ್ದರು.