ಚೌಡೇಶ್ವರಿ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಶಾಖೆ ಉದ್ಘಾಟನೆ | ಸಂಸದ ರಮೇಶ ಜಿಗಜಿಣಗಿ ಅಭಿಮತ
ವಿಜಯಪುರ: ಕುಂಬಾರ ಒಂದು ಸಣ್ಣ ಸಮಾಜವಾಗಿದ್ದು, ಈ ಸಮಾಜ ಬಾಂಧವರು ಒಳ್ಳೆಯ ಜನ, ಸಂಸ್ಕಾರವಂತರು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಶುಕ್ರವಾರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಿಂದಗಿಯ ಚೌಡೇಶ್ವರಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವಿಜಯಪುರ ಶಾಖೆ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕುಂಬಾರಿಕೆ ಜತೆಗೆ ಒಕ್ಕಲುತನ ಮಾಡಿ ಜೀವನ ಸಾಗಿಸುತ್ತಿರುವ ಸಣ್ಣ ಸಮಾಜವಾದರೂ ಎಲ್ಲರೂ ಒಗ್ಗಟ್ಟಾಗಿದ್ದೀರಿ. ಸಮಾಜದ ಬಡವರ ಏಳ್ಗೆಗಾಗಿ ಸಹಕಾರಿ ಬ್ಯಾಂಕ್ ಆರಂಭಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ಸಮಾಜದ ಬಡಜನರು ಬ್ಯಾಂಕ್ ಸದುಪಯೋಗ ಪಡೆದು ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕ್ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಈಗ ರಾಜಕೀಯದಲ್ಲಿ ಜಾತಿ ರಾಜಕಾರಣ ಹೆಚ್ಚಾಗಿದೆ. ಒಂದು ಸಮಾಜದಿಂದ ಗೆದ್ದು ಬರುತ್ತೇವೆ, ರಾಜಕೀಯ ಮಾಡುತ್ತೇವೆ ಎಂದು ಕೆಲವರು ತಿಳಿದಿದ್ದಾರೆ. ಆದರೆ, ಎಲ್ಲ ಸಮಾಜದವರಿಂದ ರಾಜಕೀಯ ಸಾಧ್ಯ. ಅದಕ್ಕೆ ನಾನೇ ಉದಾಹರಣೆ ಎಂದರು.ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಸಣ್ಣ ಸಮಾಜ ಎಂಬ ಕೀಳರಿಮೆ ಬೇಡ. ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಮುನ್ನಡೆಯಬೇಕು. ಸಮಾಜದವರು ಸಂಘಟಿತರಾಗಿದ್ದೀರಿ ಎಂಬುದಕ್ಕೆ ಇಲ್ಲಿ ಸೇರಿದ ಜನಸ್ತೋಮ ನೋಡಿದರೆ ಗೊತ್ತಾಗುತ್ತದೆ. ಬ್ಯಾಂಕ್ ನ ಸದುಪಯೋಗ ಮಾಡಿಕೊಂಡು
ಸಂಘದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಶಿಕ್ಷಣದಿಂದ ಸಾಧನೆ ಮಾಡಲು ಸಾಧ್ಯ. ಅದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ದೇಶಕ್ಕೆ ಸಹಕಾರಿ ರಂಗದ ಕೊಡುಗೆ ದೊಡ್ಡದಿದೆ. ದೇಶದ ಆರ್ಥಿಕ ಪರಿಸ್ಥಿತಿ ಬದಲಾಗಬೇಕಾದರೆ ಅದಕ್ಕೆ ಸಾಲ ನೀಡಬೇಕು. ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆತರೆ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಸಕ್ರಿ, ಸಹಕಾರಿ ಸಂಘಗಳ ಪ್ರಭಾರ ಉಪನಿಂಬಂಧಕಿ ಎಸ್.ಕೆ.ಭಾಗ್ಯ ಮಾತನಾಡಿದರು.
ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯರು, ವಿಜಯಪುರದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಂಘದ ಅಧ್ಯಕ್ಷ ಬಿ.ಜಿ.ನಾಗೂರ ಅಧ್ಯಕ್ಷತೆ ವಹಿಸಿದ್ದರು.