ಕರುನಾಡು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ | ಕವಿಗೋಷ್ಠಿ | ಪದಗ್ರಹಣ
ಬಸವನಬಾಗೇವಾಡಿ: ಕನ್ನಡ ಸಾಹಿತ್ಯ, ಕನ್ನಡ ಭಾಷೆ ಸಂರಕ್ಷಣೆ ಕುರಿತು ಪುಂಖಾನುಪುಂಕವಾಗಿ ಮಾತನಾಡುವವರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ. ಇಂತಹವರಿಂದ ಕನ್ನಡ ಭಾಷೆ ಬೆಳೆಸುವ ಕಾರ್ಯ ಹೇಗೆ ಆಗುತ್ತದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.
ಪಟ್ಟಣದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರುನಾಡು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ರಾಜ್ಯಮಟ್ಟದ ಕರುನಾಡು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಟೀಕೆ ಮಾಡುವುದರಿಂದ ಕನ್ನಡ ಭಾಷೆ ಬೆಳೆಯಲು ಸಾಧ್ಯವಿಲ್ಲ. ಎಲ್ಲರೂ ಕೂಡಿಕೊಂಡು ಕನ್ನಡ ಭಾಷೆ ನಿರಂತರವಾಗಿ ಬೆಳೆಯುವಂತೆ ಕೈಜೋಡಿಸಬೇಕು. ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.೭೫ ರಷ್ಟು ಉದ್ಯೋಗ ಸಿಗಬೇಕೆಂದು ಸರೋಜಿನಿ ಮಹಿಷಿ ವರದಿ ಇನ್ನೂ ಅನುಷ್ಠಾನ ಬಾರದೇ ಇರುವದು ನೋವಿನ ಸಂಗತಿ. ಆದಷ್ಟು ಬೇಗ ಈ ವರದಿಯ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕೆಂದರು.
ಶಿಕ್ಷಕ ಮಶ್ಯಾಕ ಗೌಂಡಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸು. ಎರಢೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಐತಿಹಾಸಿಕ ಹಿನ್ನೆಲೆ ನಮ್ಮ ನಾಡಿಗಿದೆ. ಇಂತಹ ನಾಡಿನಲ್ಲಿ ನಾವು ಜನಿಸಿದ್ದು ಪುಣ್ಯ ಎಂದ ಅವರು, ಪ್ರತಿ ಮಗುವೂ ಹುಟ್ಟಿದಾಗ ವಿಶ್ವಮಾನವನಾಗಿರುತ್ತಾನೆ.. ನಾವೆಲ್ಲರೂ ಇಂದು ಕುವೆಂಪು ಅವರ ವಿಶ್ವಮಾನವ ಸಂದೇಶ ಅರಿತುಕೊಂಡು ಕನ್ನಡ ನಾಡು-ನುಡಿ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ನಾಡದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಕಸಾಪ ತಾಲೂಕಾಧ್ಯಕ್ಷ ಶಿವರುದ್ರಯ್ಯ ಹಿರೇಮಠ, ಕರುನಾಡು ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಅಶೋಕ ಹಾರಿವಾಳ ಮಾತನಾಡಿದರು.
ಅಧ್ಯಕ್ಷತೆಯನ್ನು ಉಪನ್ಯಾಸಕ ಸಿ.ಎಸ್.ಚಟ್ಟೇರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ವೀರಣ್ಣ ಮರ್ತುರ, ಆರ್.ಜಿ.ಅಳ್ಳಗಿ, ಮಹಾಂತೇಶ ಸಂಗಮ, ಎನ್.ಎಸ್.ಹೂಗಾರ, ಶಿವಪುತ್ರ ಅಜಮನಿ, ದೇವೇಂದ್ರ ಗೋನಾಳ, ಪ್ರಭಾಕರ ಖೇಡದ, ಎ.ಎಂ.ನರಸರೆಡ್ಡಿ, ಕರುನಾಡು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಅಸ್ಲಂ ಶೇಖ ಇತರರು ಇದ್ದರು.
ಶಾಂತಾ ಚೌರಿ ಪ್ರಾಸ್ತವಿಕವಾಗಿ ಮಾತನಾಡಿದರು. ಎನ್.ಎನ್.ಅಂಗಡಿ ಸ್ವಾಗತಿಸಿದರು. ಸಂತೋಷ ಪಾಟೀಲ ನಿರೂಪಿಸಿದರು. ಸಂಗಮೇಶ ತಾಳಿಕೋಟಿ ವಂದಿಸಿದರು.