ವಿಜಯಪುರ: ಕರ್ನಾಟಕ ರಾಜ್ಯೋತ್ಸವ ದಿನದಂದು ನಗರದ ಕೇಂದ್ರ ಕಾರಾಗೃಹದಲ್ಲಿ ಮೈಸೂರು ಗಂಗೋತ್ರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಬಂಧಿಗಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಧಾರಿತ ವೃತ್ತಿಪರ ಕೋರ್ಸ್ಗಳ ಅಧ್ಯಯನ ಕೇಂದ್ರಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಾರಾಗೃಹದ ಬಂಧಿಗಳು ಬಿಡುಗಡೆಯ ನಂತರದ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಲು ಉನ್ನತ ಶಿಕ್ಷಣ ಕೇಂದ್ರಗಳು ಅತೀ ಅಗತ್ಯವಾಗಿವೆ. ಬಂದಿಗಳ ಭವಿಷ್ಯದ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ಹಮ್ಮಿಕೊಳ್ಳಲು ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದ ಅವರು, ಕನ್ನಡ ಭಾಷೆ, ನೆಲ, ಜಲದ ಕುರಿತಾದ ಗ್ರಂಥಗಳನ್ನು ಕಾರಾಗೃಹದ ಗ್ರಂಥಾಲಯಕ್ಕೆ ಒದಗಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ಮಾತನಾಡಿ, ಕಾರಾಗೃಹದ ಕೈದಿಗಳಿಗೆ ಇದೊಂದು ಸದಾವಕಾಶ ದೊರೆತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕ ಡಾ|| ಐ.ಜೆ.ಮ್ಯಾಗೇರಿ ಅವರು ಮಾತನಾಡಿ, ಹೆತ್ತತಾಯಿ ಹೊತ್ತ ನಾಡು ಸ್ವರ್ಗ ಸಮಾನ. ಒಳ್ಳೆಯ ಮನುಷ್ಯರಾಗಿ ಬದುಕುವ ಅವಕಾಶ ಪಡೆಯಿರಿ.ಶ್ರೇಷ್ಠನಾಗಲು ಸಾಕಷ್ಟು ಸಮಯ ಮತ್ತು ಸಹನೆ ಬೇಕು ಕನಿಷ್ಠನಾಗಲು ಸ್ವಲ್ಪ ಸಮಯ ಸಾಕು ಸಕಲ ಮೂಲ ಸೌರ‍್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಇದರ ಸದುಪಯೋಗವಾಗಲಿ ಎಂದು ಹೇಳಿದರು.
ಕಾರಾಗೃಹದ ಸಹಾಯಕ ಆಡಳಿತಾಧಿಕಾರಿ ರವಿ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕ ಅರುಣ.ಕೆ.ಎಸ್. ಕಾರಾಗೃಹದ ಮುಖ್ಯ ವೈದ್ಯಾಧಿಕಾರಿ ಡಾ|| ಅನಿಲ ಕೊರಬು ಸೇರಿದಂತೆ ಕಾರಾಗೃಹದ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಶಕೀನಾಬೇಗಂ ನದಾಫ್ ನಿರೂಪಿಸಿ ವಂದಿಸಿದರು ಹಾಗೂ ಸಂತೋಷ ಸಂತಾಗೋಳ ಸ್ವಾಗತಿಸಿದರು.
Related Posts
Add A Comment