ಬಸವನಬಾಗೇವಾಡಿ: ಪಟ್ಟಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಂಗವಾಗಿ ನಡೆದ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಯಾವುದೇ ವಾದ್ಯಮೇಳವಿಲ್ಲದೇ ಕೇವಲ ಟ್ಯಾಕ್ಟರ್ಗಳಲ್ಲಿ ವಿವಿಧ ಶಾಲಾ ಮಕ್ಕಳು ವಿವಿಧ ಮಹನೀಯರ ವೇಷಭೂಷಣ ಧರಿಸಿದ ಮೆರವಣಿಗೆ ಹೊರತು ಪಡಿಸಿ ಯಾವುದೇ ಇಲಾಖೆಯ ಸ್ತಬ್ಧ ಚಿತ್ರಗಳು ಕಂಡುಬರದೇ ಕಾಟಾಚಾರಕ್ಕೆ ಎಂಬಂತೆ ತಾಲೂಕಾಡಳಿತದಿಂದ ರಾಜ್ಯೋತ್ಸವ ಜರುಗಿತು.
ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ಧ್ವಜಾರೋಹಣ ನೆರವೇರಿದ ನಂತರ ಮೆರವಣಿಗೆಯು ಸಪ್ಪಾಗಿ ಸಾಗಿತು. ಮೆರವಣಿಗೆಯು ಬೆಳಗ್ಗೆ ೯.೩೦ ಗಂಟೆಗೆ ತಡವಾಗಿ ಸಾಗಿದ ನಂತರ ಡೊಳ್ಳು ಮೇಳ, ಯಾವುದೇ ವಾದ್ಯ ಮೇಳ ಇಲ್ಲ ಎಂದು ಕರವೇ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ತಹಸೀಲ್ದಾರ ಜಿ.ಎಸ್.ನಾಯಕ ಅವರ ಗಮನಕ್ಕೆ ತಂದಾಗ ಅವರು ಬಿಇಓ ಅವರಿಗೆ ಹೇಳಿದ್ದೆ. ಅವರು ವ್ಯವಸ್ಥೆ ಮಾಡಿಲ್ಲ ಎಂದಾಗ ಅವರು ಆಕ್ರೋಶಗೊಂಡಾಗ ಬಿಇಓ ವಸಂತ ರಾಠೋಡ ಅವರು ಸ್ಥಳೀಯ ಹೆಣ್ಣುಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಂದ ಬ್ಯಾಂಡ್ ಸೆಟ್ ತರಿಸಿ ಅವರಿಂದ ಮೆರವಣಿಗೆ ಕೊಂಚ ಮೆರಗು ಬಂತು. ಮೆರವಣಿಗೆ ಸಾಗುವ ವೇಳೆಯಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಎರಡು ಟ್ಯಾಕ್ಟರ್ ಚಾಲಕರು ನಾ ಮುಂದು, ತಾ ಮುಂದು ಎಂಬ ಭರಾಟೆಯಲ್ಲಿ ಸಾಗುವಾಗ ಪರಸ್ಪರ ಟ್ಯಾಕ್ಟರ್ಗಳು ತಾಗಿ ಅಪಘಾತವಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಜರುಗಿತು.
ಸಮಾರಂಭದಲ್ಲಿ ಮಾತನಾಡಿದ ಕರವೇ ಯುವ ಘಟಕದ ಜಿಲ್ಲಾ ಅಧ್ಯಕ್ಷ ಅಶೋಕ ಹಾರಿವಾಳ ಅವರು ಕರ್ನಾಟಕ ರಾಜ್ಯೋತ್ಸವ ಅಚ್ಚುಕಟ್ಟಾಗಿ ತಾಲೂಕಾಡಳಿತ ಮಾಡಿಲ್ಲ. ಪ್ರತಿಯೊಬ್ಬ ಕನ್ನಡಿಗರ ಹಬ್ಬವಾದ ರಾಜ್ಯೋತ್ಸವದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸುವಂತಾದರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸುವಂತಾಗಬೇಕೆಂದರು.
ಸಮಾರಂಭದಲ್ಲಿ ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಸಾಕಷ್ಟು ಮಹನೀಯರು ಶ್ರಮಿಸಿದ್ದಾರೆ. ನಾವೆಲ್ಲರೂ ಕನ್ನಡವನ್ನು ಪ್ರೀತಿಸಿ,ಗೌರವಿಸಬೇಕು. ಮಕ್ಕಳಿಗೆ ಕನ್ನಡದಲ್ಲಿ ಆಸಕ್ತಿ ಬೆಳೆಸುವ ಕಾರ್ಯ ಮಾಡಬೇಕೆಂದರು.
ಉಪನ್ಯಾಸ ನೀಡಿದ ತಳೇವಾಡ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಸಂಗಮೇಶ ಪೂಜಾರಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸಿದಾಗ ಮಾತ್ರ ನಾವು ಕನ್ನಡ ನಾಡಿನಲ್ಲಿ ಜನಿಸಿದ್ದು ಸಾರ್ಥಕವಾಗುತ್ತದೆ. ಕನ್ನಡ ರಾಜ್ಯೋತ್ಸವವನ್ನು ಡಾಂಭಿಕವಾಗಿ ಆಚರಣೆ ಮಾಡದೇ ಉತ್ಸಾಹದಿಂದ ಆಚರಿಸುವಂತಾದರೆ ಕಾರ್ಯಕ್ರಮ ತುಂಬಾ ಯಶಸ್ವಿಯಾಗುತ್ತದೆ. ಈ ಕಾರ್ಯಕ್ರಮದಲ್ಲಿ ಹೆಚ್ಚು ಖಾಲಿ ಕುರ್ಚಿಗಳಿರುವದು ಕಂಡುಬರುತ್ತಿರುವುದು ವಿಷಾದಕರ ಸಂಗತಿ. ಈ ರೀತಿಯಾಗದಂತೆ ಕಾರ್ಯಕ್ರಮ ಆಯೋಜನೆ ಮಾಡಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದಲಿಂಗ ಸ್ವಾಮೀಜಿ, ತಹಸೀಲ್ದಾರ ಜಿ.ಎಸ್.ನಾಯಕ, ತಾಪಂ ಇಓ ಡಾ.ಯುವರಾಜ ಹನಗಂಡಿ, ಬಿಇಓ ವಸಂತ ರಾಠೋಡ, ಪಿಐ ಶರಣಗೌಡ ನ್ಯಾಮಣ್ಣನವರ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಕಸಾಪ ತಾಲೂಕಾಧ್ಯಕ್ಷ ಶಿವರುದ್ರಯ್ಯ ಹಿರೇಮಠ, ಮುಖಂಡರಾದ ಶಂಕರಗೌಡ ಬಿರಾದಾರ, ದೇವೇಂದ್ರ ಗೋನಾಳ, ಶಿವಾನಂದ ಮಂಗಾನವರ, ಸಂಗನಗೌಡ ಚಿಕ್ಕೊಂಡ, ಬಸಣ್ಣ ದೇಸಾಯಿ, ಮಹಾಂತೇಶ ಚಕ್ರವರ್ತಿ, ಮಹಾಂತೇಶ ಸಾಸಾಬಾಳ ಇತರರು ಇದ್ದರು.
ಪಿ.ಯು.ರಾಠೋಡ ಸ್ವಾಗತಿಸಿದರು. ಉಷಾಕಿರಣ ಮನೋಹರ ನಿರೂಪಿಸಿದರು. ಶಿವಾನಂದ ಮಂಗಾನವರ ವಂದಿಸಿದರು.
ಕೊನೆಯಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
Related Posts
Add A Comment