ಮುದ್ದೇಬಿಹಾಳ: ಇಲ್ಲಿನ ತಾಲೂಕಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಾಣಾಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸದೇ ಇಂಗ್ಲೀಷ್ ನಾಮಫಲಕಗಳನ್ನು ಹೊಂದಿದ ಶಾಲೆಗಳ ಸ್ಥಬ್ಧ ಚಿತ್ರವನ್ನು ಊರೆಲ್ಲ ಮೆರವಣಿಗೆ ಮಾಡಿ, ಕನ್ನಡ ಪರ ಸಂಘಟನೆಗಳಿಗೆ ಮತ್ತು ಕನ್ನಡಾಭಿಮಾನಿಗಳ ಮನಸ್ಸಿಗೆ ನೋವು ತಂದಿದ್ದು ಜಿಲ್ಲಾಧಿಕಾರಿಗಳು ಈ ಕೂಡಲೇ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
ಜಯ ಕರ್ನಾಟಕ ಸಂಘಟನೆಯ ತಾಲೂಕು ಮುಖಂಡ ಹುಸೇನ ಮುಲ್ಲಾ, ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ ಕೊಪ್ಪ ಸೇರಿದಂತೆ ಮತ್ತೀತರರು ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಬಳಸಿ ಕನ್ನಡ ಉಳಿಸಿ ಎಂದು ಅಧಿಕಾರಿಗಳು ಭಾಷಣ ಮಾಡುತ್ತಾರೆ. ಆದರೆ ಸ್ಥಬ್ಧ ಚಿತ್ರಗಳ ಸಂಪೂರ್ಣ ಜವಾಬ್ದಾರಿ ಹೊತ್ತ ಬಿಇಓ ಯು.ಬಿ.ಧರಿಕಾರ ಶಾಲೆಯವರಿಗೆ ಸೂಕ್ತ ಮಾರ್ಗದರ್ಶನ ನೀಡದೇ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿದ್ದರಿಂದ ಇಂಗ್ಲೀಷ್ ನಾಮಫಲಕಗಳುಳ್ಳ ಶಾಲೆಗಳ ಸ್ಥಬ್ಧ ಚಿತ್ರಗಳನ್ನು ತಾನೇ ಮುಂದೆ ನಿಂತು ಊರೆಲ್ಲ ಮೆರವಣಿಗೆಯ ಮೂಲಕ ಪ್ರದರ್ಶಿಸಿ ರಾಜ್ಯದ ಕನ್ನಡ ಮನಸ್ಸುಗಳಿಗೆ ನೋವುಂಟು ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಈ ನಾಮಫಲಕವನ್ನು ನಾನು ಗಮನಿಸಿಲ್ಲ ಎಂದು ಬೇಜಬ್ದಾರಿಯುತ ಉತ್ತರ ನೀಡಿದ್ದಾರೆ. ಅಲ್ಲದೇ ಇಂಗ್ಲೀಷ್ ನಾಮಫಲಕಗಳನ್ನು ಗಮನಿಸಿ ನಾವು ಸ್ಥಬ್ಧ ಚಿತ್ರಗಳಿಗೆ ಪ್ರಶಸ್ತಿ ನೀಡುವ ಸಂದರ್ಭ ಆ ಶಾಲೆಗಳಿಗೆ ಪ್ರಶಸ್ತಿ ನೀಡಬಾರದೆಂದು ಮನವಿ ಮಾಡಿಕೊಂಡರೆ ಪ್ರಶಸ್ತಿಗಳನ್ನು ಅವರ ಶಾಲೆಗೇ ಕಳಿಸುವುದಾಗಿ ಘೋಷಿಸುವಂತೆ ಸೂಚಿಸುತ್ತಾರೆ. ಇದೆಲ್ಲವನ್ನು ನೋಡಿದರೆ ಬಿಇಓ ಧರಿಕಾರ ಗೆ ಕನ್ನಡದ ಮೇಲೆ ಎಷ್ಟೊಂದು ಅಭಿಮಾನವಿದೆ ಎಂದು ತಿಳಿಯುತ್ತದೆ. ಕನ್ನಡದ ಬಗ್ಗೆ ಕನ್ನಡಾಭಿಮಾನದ ಬಗ್ಗೆ ವಿಶೇಷ ಕಾಳಜಿ ಇರಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಯ ನಿರ್ಲಕ್ಷತನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೂಡಲೇ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗುತ್ತದೆ ಎಂದರು.
Related Posts
Add A Comment