ಕರ್ನಾಟಕ ರಾಜ್ಯೋತ್ಸವ ದಿನಾಚರಣೆ | ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ
ಸಚಿವ ಡಾ.ಎಂ.ಬಿ.ಪಾಟೀಲ ಅಭಿಮತ
ವಿಜಯಪುರ: ಕನ್ನಡ ಎನ್ನುವುದು ಕೇವಲ ಭಾಷೆ ಮಾತ್ರವಲ್ಲ, ಅದು ನಮ್ಮ ಸಂಸ್ಕೃತಿ. ಕನ್ನಡವು ಕರ್ನಾಟಕದಲ್ಲಿ ನೆಲೆಸಿರುವ ಎಲ್ಲ ಜನರ ಅಸ್ಮಿತೆಯಾಗಿದೆ. ಈ ಬಾರಿಯ ರಾಜ್ಯೋತ್ಸವವು ಏಳು ಕೋಟಿ ಕನ್ನಡಿಗರ ಪಾಲಿಗೂ ಸಂಭ್ರಮದ ಪರ್ವವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದ ನಂತರ ಮಾತನಾಡಿದ ಅವರು,ನಮ್ಮ ರಾಜ್ಯಕ್ಕೆ `ಕರ್ನಾಟಕ’ವೆಂಬ ನಾಮಕರಣವಾದ ಶುಭ ಸಂದರ್ಭದ ಸುವರ್ಣ ಮಹೋತ್ಸವ ವರ್ಷವಿದು. ಕರ್ನಾಟಕವು ಮೊದಲಿನಿಂದಲೂ ಉದ್ಯಮಸ್ನೇಹಿ ರಾಜ್ಯವಾಗಿದೆ. ಐಟಿ, ಬಿಟಿ, ಇವಿ, ಸ್ಟಾರ್ಟಪ್, ಹೂಡಿಕೆ ಆಕರ್ಷಣೆ, ಕೈಗಾರಿಕೆಗಳಿಗೆ ಉತ್ತೇಜನ, ರಿಯಾಯಿತಿ/ವಿನಾಯಿತಿ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಒಡಂಬಡಿಕೆಗಳು ಮತ್ತು ಸಹಭಾಗಿತ್ವ ಇವೆಲ್ಲದರಲ್ಲೂ ಕರ್ನಾಟಕವು ದೂರದೃಷ್ಟಿಯುಳ್ಳ ಸಮರ್ಪಕ ನೀತಿಗಳನ್ನು ರೂಪಿಸಿಕೊಂಡು ಬರುತ್ತಿರುವ ಮೊಟ್ಟಮೊದಲ ರಾಜ್ಯವಾಗಿದೆ ಎಂದು ಹೇಳಿದರು.
ಐದು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ, ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಐದು ಗ್ಯಾರಂಟಿಗಳ ಅನುಷ್ಠಾನದ ಮೂಲಕ ಅಭೂತಪೂರ್ವ ಸಾಧನೆ ಮಾಡಿ, ಇತಿಹಾಸವನ್ನೇ ಸೃಷ್ಟಿಸಿದೆ. ವಿದೇಶಿ ನೇರ ಹೂಡಿಕೆಯಲ್ಲಿ ಇಡೀ ದೇಶದಲ್ಲಿ ಪ್ರಥಮ ಸ್ಥಾನದಲ್ಲಿ ವಿಜೃಂಭಿಸುತ್ತಿದೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಈ ಸರಕಾರದಲ್ಲಿ ನನಗೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ ಖಾತೆಯ ಹೊಣೆಯನ್ನೂ ವಹಿಸಲಾಗಿದ್ದು, ರಾಜ್ಯವನ್ನು ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಮಹತ್ವಾಕಾಂಕ್ಷೆ ಹೊಂದಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯು ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ ಹೆಸರುವಾಸಿಯಾಗಿದೆ. ಕನ್ನಡ ನೆಲ-ಜಲದ ಕಾಳಜಿಯನ್ನು ಮಾಡಿದವರು ನಮ್ಮಲ್ಲೂ ಇದ್ದಾರೆ. ವಿಜಯಪುರದ ವಚನ ಗುಮ್ಮಟವೆಂದು ಖ್ಯಾತನಾಮರಾದ ಡಾ|| ಫ.ಗು. ಹಳಕಟ್ಟಿಯವರು ನಮಗೆಲ್ಲ ಪ್ರಾತಃಸ್ಮರಣೀಯರು. ಕನ್ನಡ ಚಳುವಳಿಯ ಪ್ರಮುಖ ಹೋರಾಟಗಾರರಾದ ಚಿಕ್ಕೋಡಿ ತಮ್ಮಣ್ಣಪ್ಪನವರ ಪ್ರೇರಣೆಯಿಂದಾಗಿ ತಮ್ಮ ಜೀವನವನ್ನೇ ವಚನ ಸಾಹಿತ್ಯದ ಸಂರಕ್ಷಣೆಗಾಗಿ ಮುಡುಪಿಟ್ಟು ಬಸವಾದಿ ಪ್ರಮಥರ ವಚನಗಳನ್ನು ಜಗತ್ತಿಗೇ ಪರಿಚಯಿಸಿದರು. ವಿಶ್ವ ಸಾಹಿತ್ಯಕ್ಕೆ ನಮ್ಮ ವಚನ ಸಾಹಿತ್ಯದ ಕೊಡುಗೆಯನ್ನು ಮರೆಯುವಂತಿಲ್ಲ. ನಮ್ಮ ಜಿಲ್ಲೆಯ ಮೊಹರೆ ಹನುಂತರಾಯರಾಗಲಿ, ರಾಜಾರಾಮ ದುಬೆ, ಚೆನ್ನಬಸಪ್ಪ ಅಂಬಲಿ ಮುಂತಾದವರು ಮುಂಬೈ ಕರ್ನಾಟಕ ಪ್ರಾಂತ್ಯದ ಹೋರಾಟಗಾರರೊಂದಿಗೆ ಸೇರಿ ಕನ್ನಡ ಚಳುವಳಿಗೆ ನೀಡಿದ ಕೊಡುಗೆ ಅವಿಸ್ಮರಣೀಯವಾದುದು ಎಂದು ಹೇಳಿದರು.
ನಾನು ಕೈಗಾರಿಕಾ ಸಚಿವನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ವಿಜಯಪುರಕ್ಕೆ ಮಂಜೂರಾಗಿದ್ದ ವಿಮಾನ
ನೂತನ ಸರಕಾರವು ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಮಂಡಿಸಲ್ಪಟ್ಟ ಬಜೆಟ್ಟಿನಲ್ಲಿ ವಿಜಯಪುರಕ್ಕೆ ಮ್ಯಾನಫ್ಯಾಕ್ಚರಿಂಗ್ ಹಬ್ ಅನ್ನು ಮಂಜೂರು ಮಾಡಲಾಗಿದೆ. ಇದರಿಂದಾಗಿ, ಕೈಗಾರಿಕಾ ವಲಯದಲ್ಲಿ ತಯಾರಿಕೆಯ ಚಟುವಟಿಕೆಗಳು ಇಲ್ಲಿ ನೆಲೆಗೊಂಡು, ಸಾವಿರಾರು ಉದ್ಯೋಗಗಳು ಸ್ಥಳೀಯ ಯುವಜನರಿಗೆ ಸಿಗಲಿವೆ.
ಈ ವರ್ಷದ ರಾಜ್ಯೋತ್ಸವ ವಿಶೇಷವೆಂದರೆ, ಕರ್ನಾಟಕ ಸರ್ಕಾರವು ೨೦೨೩ರ ನವೆಂಬರ್ ೦೧ ರಿಂದ ೨೦೨೪ರ ನವೆಂಬರ್ ೧ ರವರೆಗೆ ಕರ್ನಾಟಕ ಸಂಭ್ರಮ ೫೦ನ್ನು “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಅಭಿಯಾನವನ್ನು ವರ್ಷಪೂರ್ತಿ ಆಚರಿಸಲಿದೆ.ಯುವಜನತೆಯಲ್ಲಿ “ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು” ಮೂಡಿಸುವ ಯೋಜನೆಗಳನ್ನು ಕೂಡಾ ಹಮ್ಮಿಕೊಳ್ಳುವುದಾಗಿ ಘೋಷಿಸಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ವಿಜಯಪುರ ಉಪವಿಭಾಗಾಧಿಕಾರಿ ಬಸಣಪ್ಪ ಕಲಶೆಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಕನ್ನಡಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.