ಉದಯರಶ್ಮಿ ದಿನಪತ್ರಿಕೆ
ಇಂಡಿ: ಕರ್ನಾಟಕ ರಾಜ್ಯ (೬-೮) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ೨೦೨೬-೩೧ ನೇ ಅವಧಿಗೆ ಕರ್ನಾಟಕ ರಾಜ್ಯ ಸಂಘದ ಚುನಾವಣೆ ಶುಕ್ರವಾರ ಬೆಂಗಳೂರಿನಲ್ಲಿ ಜರುಗಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತಾಲೂಕಿನ ಹಂಜಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಿಪಿಟಿ ಇಂಗ್ಲೀಷ್ ಶಿಕ್ಷಕ ಚಂದ್ರಶೇಖರ ಹಕಾರಿ ಸ್ಪರ್ಧಿಸಿ ೨೧೩ ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಗೆಲುವು ಸಾಧಿಸಿ ಮಾತನಾಡಿದ ಚಂದ್ರಶೇಖರ ಹಕಾರಿ, ಸಂಘಟನಾತ್ಮಕ ಶಕ್ತಿಯೊಂದಿಗೆ ರಾಜ್ಯದ ಸಮಸ್ತ ಜಿಪಿಟಿ ಶಿಕ್ಷಕರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುವೆ. ಶಿಕ್ಷಕರ ಅಭ್ಯುದಯ ಜತೆಗೆ ಶೈಕ್ಷಣಿಕ, ಆಡಳಿತಾತ್ಮಕ ಸುಧಾರಣೆಗೆ ಕೈಜೋಡಿಸುವೆ. ಶಿಕ್ಷಣ ಇಲಾಖೆಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕಾಳಜಿ ವಹಿಸುವೆ ಎಂದು ಹೇಳಿದರು.
ಈ ವಿಜಯೋತ್ಸವದಲ್ಲಿ ಭಾಗಿಯಾದ ಇಂಡಿ ತಾಲೂಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (ಜಿಪಿಟಿ) ಅಧ್ಯಕ್ಷ ಶಂಕರ ಕೋಳೆಕರ, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ಕವಟಗಿ, ಜಿಪಿಟಿ ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಶಶಿಕುಮಾರ ವಡ್ಡರ, ಉಪಾಧ್ಯಕ್ಷ ಎನ್ ಸಿ ಪುಠಾಣಿ, ಖಜಾಂಚಿ ಸಿದ್ದರಾಮ ಡಾಬೆ, ಹನಮಂತ್ರಾಯ ಪೂಜಾರಿ ಸೇರಿದಂತೆ ಅನೇಕರು ಚಂದ್ರಶೇಖರ ಹಕಾರಿ ಅವರಿಗೆ ಸನ್ಮಾನಿಸಿ ಸಂಭ್ರಮಿಸಿದರು.

