ಶಾಂತೇಶ್ವರ ವಿದ್ಯಾವರ್ಧಕ ಸಂಘದಿಂದ ೧,೦೦೦ ಸಸಿ ನೆಡುವ ಅಭಿಯಾನ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಜನಪ್ರತಿನಿಧಿಗಳ ಜನ್ಮದಿನಾಚರಣೆ ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳ ಮೂಲಕ ಜನಮನದಲ್ಲಿ ಉಳಿಯಬೇಕು ಎಂಬ ಆಶಯದೊಂದಿಗೆ ಶನಿವಾರದಂದು ಇಂಡಿ ಶಾಸಕರಾದ ಯಶವಂತರಾಯಗೌಡ ವಿ. ಪಾಟೀಲ ಅವರ ಜನ್ಮದಿನವನ್ನು ಪರಿಸರಸ್ನೇಹಿಯಾಗಿ ಆಚರಿಸಲಾಯಿತು.
ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ೧,೦೦೦ ಸಸಿಗಳನ್ನು ನೆಡುವ ಮೂಲಕ ಹಸಿರು ಪರಿಸರ ನಿರ್ಮಾಣ ಹಾಗೂ ಬರಮುಕ್ತ ಭವಿಷ್ಯದ ಸಂಕಲ್ಪಕ್ಕೆ ಸಂಸ್ಥೆ ಚಾಲನೆ ನೀಡಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನೀಲಕಂಠಗೌಡ ಎಸ್. ಪಾಟೀಲ ಅವರು, ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅವರು ಜನರೊಂದಿಗೆ ಬೆರೆತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂದರ್ಭದಲ್ಲಿ ಅವರ ಜನ್ಮದಿನವನ್ನು ಪರಿಸರ ಸಂರಕ್ಷಣೆಯಂತಹ ಸಮಾಜಮುಖಿ ಕಾರ್ಯದೊಂದಿಗೆ ಆಚರಿಸಿರುವುದು ವಿಶೇಷ ಮಹತ್ವ ಪಡೆದಿದೆ.
ಸಾಮಾನ್ಯವಾಗಿ ಜನ್ಮದಿನಾಚರಣೆಗಳು ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು ಹಾಗೂ ಆಡಂಬರದ ಕಾರ್ಯಕ್ರಮಗಳಿಗೆ ಸೀಮಿತವಾಗುತ್ತವೆ. ಆದರೆ, ಪರಿಸರದ ಮಹತ್ವವನ್ನು ಸಾರುವ ಉದ್ದೇಶದಿಂದ ಸಸಿ ನೆಡುವ ಕಾರ್ಯಕ್ರಮ ಆಯೋಜಿಸುವ ಮೂಲಕ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘವು ವಿಭಿನ್ನ ಮಾದರಿಯನ್ನು ಪರಿಚಯಿಸಿದೆ. ಸಂಘದ ಆವರಣದಲ್ಲಿ ಗಣ್ಯರು ಹಾಗೂ ಮುಖಂಡರು ಸಸಿಗಳನ್ನು ನೆಟ್ಟು ನೀರೆರೆಯುವ ಮೂಲಕ ಶಾಸಕರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಜನಸೇವೆಯಲ್ಲಿ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಹಾರೈಸಿದರು.
ಈ ಅಭಿಯಾನದ ವಿಶೇಷತೆಯೆಂದರೆ, ನೆಟ್ಟ ಸಸಿಗಳು ಕೇವಲ ಕಾರ್ಯಕ್ರಮದ ನೆನಪಾಗಿ ಉಳಿಯದೆ, ಬೆಳೆದು ಮರಗಳಾಗುವವರೆಗೆ ಅವುಗಳ ಆರೈಕೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಂಕಲ್ಪ ಮಾಡಿರುವುದು. ನೆಟ್ಟ ಸಸಿಗಳಿಗೆ ನಿಯಮಿತವಾಗಿ ನೀರುಣಿಸಿ, ಸಂರಕ್ಷಿಸಿ ಬೆಳೆಸಿದಾಗ ಮಾತ್ರ ಈ ಪ್ರಯತ್ನದ ನಿಜವಾದ ಉದ್ದೇಶ ಈಡೇರಲಿದೆ.
ಬರದ ಸಮಸ್ಯೆ, ಹೆಚ್ಚುತ್ತಿರುವ ತಾಪಮಾನ ಹಾಗೂ ಹಸಿರು ಹೊದಿಕೆಯ ಅಗತ್ಯವನ್ನು ಮನಗಂಡು ಹಮ್ಮಿಕೊಂಡ ಈ ಕಾರ್ಯಕ್ರಮವು ಪರಿಸರ ಸಂರಕ್ಷಣೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನೂ ಸಾರಿತು. ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಕೈಗೊಂಡ ಈ ಹಸಿರು ಅಭಿಯಾನವು ಆಡಂಬರಕ್ಕಿಂತ ಜನೋಪಯೋಗಿ ಕಾರ್ಯವೇ ಶ್ರೇಷ್ಠ ಎಂಬ ಸಂದೇಶವನ್ನು ನೀಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೆಶಕ ಶಾಂತುಗೌಡ ಬಿರಾದಾರ, ರಾಜುಗೌಡ ಪಾಟೀಲ, ವರ್ಧನ ದೋಶಿ, ಸದಸ್ಯರಾದ ರವಿಗೌಡ ಪಾಟೀಲ, ಪ್ರಾ. ಶ್ರೀಶೈಲ ಸಣ್ಣಕ್ಕಿ. ವಿಜಯಕುಮಾರ ರಾಠೋಡ, ಅಶೋಕ ಬಿರಾದಾರ, ಸಿ.ಎಸ್. ಬಿರಾದಾರ, ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

