ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಟಾಕಳಿ ಗ್ರಾಮದಲ್ಲಿ ಕಬ್ಬಿನ ಹೊಲದ ಮಧ್ಯೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಚಡಚಣ ಪೊಲೀಸರು ಪತ್ತೆಹಚ್ಚಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಅ. 10ರಂದು ಚಡಚಣ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 124/2026ರ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಾಕಳಿ ಗ್ರಾಮದ ಭೀಮಾಶಂಕರ ನಾಮದೇವ ಕೋಳಿ (35) ಅವರಿಗೆ ಸೇರಿದ ಕಬ್ಬಿನ ಹೊಲದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಸುಮಾರು 4.5 ಕೆ.ಜಿ. ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ-1985ರ ಕಲಂ 20(ಎ) ಅಡಿಯಲ್ಲಿ ಚಡಚಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪಿಎಸ್‌ಐ ಅರವಿಂದ ಅಂಗಡಿ ಅವರು ತಿಳಿಸಿದ್ದಾರೆ.

