ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಈ ಹಿಂದೆ ಆಲಮಟ್ಟಿಯಲ್ಲಿ ನಡೆಸಲಾಗುತ್ತಿದ್ದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯನ್ನು ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆಸಲಾಗುತ್ತಿದ್ದು, ಇದಕ್ಕೆ ಅಖಂಡ ಕರ್ನಾಟಕ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ್ ಬಿರಾದಾರ್ ಹಾಗೂ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಆಲಮಟ್ಟಿ ಅಣೆಕಟ್ಟು ನಿಡುಗುಂದಿ ತಾಲೂಕಿನಲ್ಲಿದ್ದರೂ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುವುದರ ಉದ್ದೇಶವೇನು ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಲಮಟ್ಟಿಯಲ್ಲಿ ಸಭೆ ನಡೆಸಿದರೆ ಈ ಭಾಗದ ರೈತರಿಗೆ ಮಾಹಿತಿ ಸಿಗುತ್ತದೆ. ರೈತರನ್ನು ಹೊರಗಿಟ್ಟು, ಪ್ರತಿಭಟನೆಯ ಭಯದಿಂದ ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಅ. ೧೫ ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಐಸಿಸಿ ಸಭೆಯನ್ನು ರದ್ದುಪಡಿಸಿ, ಆಲಮಟ್ಟಿಯಲ್ಲೇ ನಡೆಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

