ಎಲ್ಲೆಂದರಲ್ಲಿ ರಸ್ತೆಯ ಮೇಲೆ ಕಸ, ಪ್ಲಾಸ್ಟಿಕ್ ಸುಟ್ಟು ಪ.ಪಂ. ಸಿಬ್ಬಂದಿ ಬೇಜವಾಬ್ದಾರಿ | ವ್ಯಾಪಾರಿಗಳಿಗೆ, ಪಾದಚಾರಿಗಳಿಗೆ ತೊಂದರೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣ ಪಂಚಾಯತ್ ಕೆಲಸಗಾರರು ವಿವಿಧೆಡೆಯಿಂದ ಸಂಗ್ರಹಿಸಿದ ಕಸವನ್ನು ಕಸ ವಿಲೇವಾರಿ ವಾಹನದಲ್ಲಿ ಸಾಗಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಬದಲು, ಮೇತ್ರಿ ಸೈಕಲ್ ಅಂಗಡಿಯ ಮುಂಭಾಗದಲ್ಲಿ ಹಾಗೂ ವಿವಿದೆಡೆ ರಸ್ತೆಯ ಮೇಲೆ ಕಸ ಹಾಗೂ ಪ್ಲಾಸ್ಟಿಕ್ ಒಂದು ಗೂಡಿಸಿ ವಿವಿಧ ತ್ಯಾಜ್ಯಗಳಿಗೆ ಬೆಂಕಿ ಹಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಸ ಹಾಗೂ ಪ್ಲಾಸ್ಟಿಕ್ ಸಂಪೂರ್ಣವಾಗಿ ಸುಡದೆ ಉಳಿದಿರುವುದರಿಂದ ಹೊಗೆ, ಬೂದಿ ಮತ್ತು ಕಸದ ತುಣುಕುಗಳು ಗಾಳಿಗೆ ಹಾರಿ ಅಂಗಡಿಯ ಒಳಗೆ ಮತ್ತು ರಸ್ತೆಯ ಮೇಲೆ ಬರುತ್ತಿವೆ. ಪ್ಲಾಸ್ಟಿಕ್ ಸುಡುವುದರಿಂದ ದಟ್ಟ ಹೊಗೆ ಹಾಗೂ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯದ ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿ, ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದ ಪಂಚಾಯತ್ ಸಿಬ್ಬಂದಿಯೇ ಎಲ್ಲೆಂದರಲ್ಲಿ ರಸ್ತೆಯ ಮೇಲೆ ಕಸ ಮತ್ತು ಪ್ಲಾಸ್ಟಿಕ್ ತಂದು ಸುಡುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಸ್ವಚ್ಛತೆಯ ಜವಾಬ್ದಾರಿ ಹೊಂದಿರುವ ಸಿಬ್ಬಂದಿಯೇ ಈ ರೀತಿ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಸಾರ್ವಜನಿಕರು ಯಾರನ್ನು ಪ್ರಶ್ನಿಸಬೇಕು ಎಂಬ ಅಸಮಾಧಾನ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಜವಾಬ್ದಾರಿ ಹೊಂದಿರುವ ಪಂಚಾಯತ್ ಸಿಬ್ಬಂದಿಯೇ ಈ ರೀತಿ ಬೇಕಾಬಿಟ್ಟಿಯಾಗಿ ಕಸ ಸುಡುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.
ಪ್ಲಾಸ್ಟಿಕ್ ತ್ಯಾಜ್ಯವನ್ನು ಬಹಿರಂಗವಾಗಿ ಸುಡುವುದರಿಂದ ಉಂಟಾಗುವ ಹೊಗೆ ಪರಿಸರಕ್ಕೆ ಹಾನಿಕಾರಕವಾಗಿದ್ದು, ಇಂತಹ ಕೃತ್ಯಗಳನ್ನು ತಡೆಯುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ.
ಪರಿಸರ ಸ್ವಚ್ಛತೆ ಕಾಪಾಡಬೇಕಾದ ಸಿಬ್ಬಂದಿಯೇ ಪ್ಲಾಸ್ಟಿಕ್ ಸುಟ್ಟು ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ವಿಪರ್ಯಾಸ. ಸಂಬಂಧಪಟ್ಟ ಪ.ಪಂ.ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ, ಕಸ ಮತ್ತು ಪ್ಲಾಸ್ಟಿಕ್ ಸುಡುವುದನ್ನು ತಡೆಯಬೇಕು. ಕಸ ವಿಲೇವಾರಿ ವಾಹನದ ಮೂಲಕ ತ್ಯಾಜ್ಯವನ್ನು ಸೂಕ್ತ ಸ್ಥಳಕ್ಕೆ ಸಾಗಿಸಿ ನಿಯಮಾನುಸಾರ ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಸಿಬ್ಬಂದಿಗೆ ಸೂಕ್ತ ಸೂಚನೆ ನೀಡಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಜಯ ಸೈಕಲ್ ಅಂಗಡಿ ಮಾಲೀಕರಾದ ಪ್ರಥಮೇಶ ಮೇತ್ರಿ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

