ಎರಡು ವರ್ಷಗಳಿಂದ ಚಿರತೆ ಕಾಟಕ್ಕೆ ತತ್ತರಿಸಿದ ತದ್ದೇವಾಡಿ ರೈತರು | ಅರಣ್ಯ ಇಲಾಖೆ ವಿರುದ್ಧ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಹಗಲಿನಲ್ಲಿ ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯವೇ? ರಾತ್ರಿ ವೇಳೆ ಕಾಡುಮೃಗಗಳದ್ದೇ ದರ್ಬಾರೇ? ಚಿರತೆ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿದ್ದರೂ ರೈತರ ಗೋಳು ಕೇಳುವವರಿಲ್ಲವೇ? ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದ ಅಡವಿ ವಸ್ತಿ ಪ್ರದೇಶದಲ್ಲಿ ಆಕಳು ಹಾಗೂ ಎಮ್ಮೆ ಕರು ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ಅರಣ್ಯ ಇಲಾಖೆಯ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ತದ್ದೇವಾಡಿ ಗ್ರಾಮದ ಅಡವಿ ವಸ್ತಿ ಪ್ರದೇಶದ ಕಬ್ಬಿನ ಗದ್ದೆಯಲ್ಲಿ ಭಾನುವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿ ಎರಡು ಜಾನುವಾರುಗಳನ್ನು ಕೊಂದು ಹಾಕಿದೆ. ರೈತರಾದ ಶಿವಮೂರ್ತಿ ಕೋಳೂರ ಹಾಗೂ ಲಕ್ಷ್ಮಣ ಬಸಣ್ಣ ವಡಗಾಂವಿ ಅವರಿಗೆ ಸೇರಿದ ಜಾನುವಾರುಗಳು ದಾಳಿಗೆ ಬಲಿಯಾಗಿವೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗಿದ್ದು, ಗ್ರಾಮದಲ್ಲಿ ಚಿರತೆ ಭೀತಿ ಮತ್ತಷ್ಟು ಹೆಚ್ಚಾಗಿದೆ.
ತದ್ದೇವಾಡಿ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಚಿರತೆ ದಾಳಿ ನಡೆಯುತ್ತಿದೆ ಎಂಬುದು ಸ್ಥಳೀಯರ ಆರೋಪ. ರೈತರು ತೋಟದ ವಸ್ತಿಗಳಲ್ಲಿ ವಾಸಿಸುತ್ತಿದ್ದು, ರಾತ್ರಿ ಹೊತ್ತು ಜಾನುವಾರುಗಳ ರಕ್ಷಣೆ ಮಾಡುವುದೇ ಸವಾಲಾಗಿದೆ. ಕೃಷಿ ಕೆಲಸಕ್ಕಾಗಿ ಹೊಲಗಳಿಗೆ ತೆರಳುವ ರೈತರು ಕೂಡ ಚಿರತೆ ಭಯದಲ್ಲೇ ದಿನ ಕಳೆಯುವಂತಾಗಿದೆ.
ಹಗಲಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರೆ, ರಾತ್ರಿ ವೇಳೆ ರೈತರ ಜಾನುವಾರುಗಳು ಮತ್ತು ಜನರ ಸುರಕ್ಷತೆಯ ಹೊಣೆ ಯಾರು ಹೊರುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಚಿರತೆ ದಾಳಿಯನ್ನು ತಡೆಯಲು ರಾತ್ರಿ ಗಸ್ತು, ನಿರಂತರ ನಿಗಾ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಜಾನುವಾರು ಕಳೆದುಕೊಂಡ ರೈತರಿಗೆ ಪರಿಹಾರ ಯಾವಾಗ? ಚಿರತೆ ದಾಳಿಯಿಂದ ಆಕಳು ಹಾಗೂ ಎಮ್ಮೆ ಕರುವನ್ನು ಕಳೆದುಕೊಂಡಿರುವ ರೈತರಿಗೆ ಸರ್ಕಾರದಿಂದ ಪರಿಹಾರ ಯಾವಾಗ ದೊರೆಯಲಿದೆ ಎಂಬ ಪ್ರಶ್ನೆ ಎದುರಾಗಿದೆ. ಜಾನುವಾರುಗಳೇ ರೈತರ ಜೀವನೋಪಾಯದ ಪ್ರಮುಖ ಆಧಾರವಾಗಿರುವಾಗ, ಅವುಗಳನ್ನು ಕಳೆದುಕೊಂಡ ರೈತರಿಗೆ ಆರ್ಥಿಕ ನೆರವು ನೀಡುವುದು ಅಗತ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಹಾನಿಯ ವರದಿ ಸಿದ್ಧಪಡಿಸಿ, ನಿಯಮಾನುಸಾರ ಪರಿಹಾರ ದೊರಕಿಸಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.
ಚಿರತೆ ಸೆರೆ ಹಿಡಿಯದಿದ್ದರೆ ರಸ್ತೆ ತಡೆ: ತದ್ದೇವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಭೀತಿ ನಿವಾರಿಸಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ದಾಳಿ ನಡೆಸುತ್ತಿರುವ ಚಿರತೆಯನ್ನು ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಂಡು, ರಾತ್ರಿ ಗಸ್ತು ಹೆಚ್ಚಿಸಿ ಜನರು ಹಾಗೂ ಜಾನುವಾರುಗಳಿಗೆ ಸುರಕ್ಷತೆ ಒದಗಿಸಬೇಕು. ಗಸ್ತು ತಿರುಗಿದ ಬಗ್ಗೆ ಪುರಾವೆ ಅಥವಾ ಸ್ಥಳದ ಜಿಪಿಎಸ್ ಫೋಟೊ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಸಲ್ಲಿಸಬೇಕು ಎಂಬುದು ರೈತರ ಆಗ್ರಹವಾಗಿದೆ, ಚಿರತೆ ದಾಳಿಯಿಂದ ನಷ್ಟ ಅನುಭವಿಸಿದ ರೈತರಿಗೆ ನಿಯಮಾನುಸಾರ ಪರಿಹಾರ ನೀಡಬೇಕು. ಇಲ್ಲದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಗನಾಥಗೌಡ ಬಿರಾದಾರ ಎಚ್ಚರಿಕೆ ನೀಡಿದ್ದಾರೆ.
ರೈತರ ಬೆವರಿನ ದುಡಿಮೆಗೆ ಬೆಲೆಯಿಲ್ಲವೇ? ಜಾನುವಾರುಗಳ ಜೀವಕ್ಕೆ ರಕ್ಷಣೆಯಿಲ್ಲವೇ? ನಷ್ಟವಾದಾಗ ಪರಿಹಾರಕ್ಕಾಗಿ ರೈತರು ಕಚೇರಿಯಿಂದ ಕಚೇರಿಗೆ ಅಲೆಯಬೇಕೇ? ಅರಣ್ಯ ಇಲಾಖೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದರ ಜೊತೆಗೆ, ಚಿರತೆ ಹಾವಳಿ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ
ಬಾಕ್ಸ್
ಜಾನುವಾರು ಕಳೆದುಕೊಂಡ ರೈತರಿಗೆ ಪರಿಹಾರ ಯಾವಾಗ?
ರಾಜ್ಯ ಹಸಿರು ಸೇನೆಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಅವರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತದ್ದೇವಾಡಿ ಗ್ರಾಮದಲ್ಲಿ ಎರಡು ವರ್ಷಗಳಿಂದ ಚಿರತೆ ಕಾಟವಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಈ ಕುರಿತು ವಿಜಯಪುರ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ರೈತರ ಆತಂಕ ದೂರವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ರೈತರ ಜೀವ ಹಾಗೂ ಜಾನುವಾರುಗಳ ರಕ್ಷಣೆಗೆ ಯಾರು ಹೊಣೆ? ಚಿರತೆ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ಯಾವಾಗ? ಇನ್ನೆಷ್ಟು ನಷ್ಟವಾದ ಬಳಿಕ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತದೆ?” ಎಂದು ಅವರು ಪ್ರಶ್ನಿಸಿದ್ದಾರೆ.

