ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ
ವಿಜಯಪುರ: ಕನ್ನಡ ಕೇವಲ ಭಾಷೆಯಲ್ಲ ದೊಡ್ಡ ಶಕ್ತಿ. ಕನ್ನಡ ಭಾಷೆ ವಿಶ್ವದ ಮೂರನೇ ಅತ್ಯಂತ ಹಳೆಯ ಭಾಷೆ. ವಿಶ್ವದ ಸಾವಿರಾರು ಭಾಷೆಗಳಲ್ಲಿ ಓದಿದಂತೆ ಬರೆಯುವ, ಬರೆದಂತೆ ಓದುವ ಹಾಗೂ ವೈಜ್ಞಾನಿಕವಾಗಿ ಅಕ್ಷರಗಳನ್ನು ವಿಂಗಡಿಸಿದ ವಿಶ್ವದ ಏಕೈಕ ಭಾಷೆ ಕನ್ನಡವಾಗಿದೆ ಎಂದು ಹಾಸ್ಯ ಭಾಷಣಕಾರರು ಹಾಗೂ ಎಸ್ .ಬಿ ವಿಸ್ಡಮ್ ಕರಿಯರ್ ಅಕಾಡೆಮಿಯ ಕನ್ನಡ ಉಪನ್ಯಾಸಕ ಭಾಗೇಶ ಮುರಡಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಅಡಿಯಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಡ ಬೆಳವಣಿಗೆಗೆ ನಮ್ಮ ಪೂರ್ವಜರ ಕೂಡುಗೆ ಅನನ್ಯವಾಗಿದೆ. ಇಂದು ಕನ್ನಡ ಭಾಷೆ ಉಳಿದಿರುವುದು ವಿದ್ಯಾವಂತರಿಂದಲ್ಲ, ಸಾಮಾನ್ಯ ಗ್ರಾಮೀಣ ಪ್ರದೇಶದ ಜನರಿಂದ ಆದ್ದರಿಂದ ನಾವು ಕನ್ನಡವನ್ನು ಎಲ್ಲ ವಲಯಗಳಲ್ಲಿ ಹೆಚ್ಚು ಹೆಚ್ಚು ಬಳಸುವ ಮೂಲಕ ಉಳಿಸಬೇಕು. ಅಂದಾಗ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಹಿರಿಯ ಜೀವಿಗಳಿಗೆ ಗೌರವಿಸಿದಂತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಡಿ ಪ್ರದೇಶದಲ್ಲಿ ಭಾಷಾ ವೈಷ್ಯಮ್ಯಗಳು ಅಧಿಕವಾಗುತ್ತಿವೆ. ರಾಜಕೀಯ ಲಾಭಕ್ಕಾಗಿ ಇಂತಹ ವಿಷಮ ಸ್ಥಿತಿಯನ್ನು ನಿರ್ಮಿಸುತ್ತಿರುವುದು ವಿಷಾದದ ಸಂಗತಿ ಎಂದರು. ಭಾಷಾವಾರು ಪ್ರಾಂತರಚನೆಗೆ ಬದ್ಧರಾಗಿರುವ ಕನ್ನಡಿಗರನ್ನು ವಿನಾಕಾರಣ ಕೆಣಕುವ ಪ್ರಯತ್ನ ಸಲ್ಲದು. ಕೊಟ್ಟಿ ದಾಖಲೆಯನ್ನು ತಂದು ಗಡಿ ಅಳೆಯುವ ಮನಸ್ಥಿತಿಗೆ ನೀವು ಬರುದಾದರೆ ಶ್ರೀವಿಜಯನ ಕವಿರಾಜಮಾರ್ಗ, ರವಿಕೀರ್ತಿಯ ಐಹೋಳೆ ಶಾಸನಗಳಿಂದ ಗಡಿ ಅಳೆಯಲು ಕನ್ನಡಿಗರು ಸಿದ್ದರಿದ್ದೇವೆ ಎಂದು ಹೇಳಿದರು.
ಈ ವೇಳೆಯಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆರ್ ಎಂ. ಮಿರ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಯಲ್ಲಿ ಒಂದು ಶಕ್ತಿ ಇದೆ. ಕನ್ನಡ ಭಾಷೆಯನ್ನು ಉಳಿಸಬೇಕು ಮತ್ತು ಬೆಳಸಬೇಕು, ಬಾಷೆಯ ಅರಿವನ್ನು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಉತ್ತಮ ಜ್ಞಾನ ಪಡೆಯಬೇಕಾಗಿದೆ. ಹೆಚ್ಚು ಹೆಚ್ಚು ಓದಬೇಕು ಅಂದಾಗ ಜ್ಞಾನ ಭಂಡಾರ ಇಮ್ಮಡಿಯಾಗುತ್ತದೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಈ ಭಾಷೆಯ ಮನುಸ್ಸುಗಳೆಲ್ಲ ಒಂದೆಡೆ ಸೇರಿ ಕರ್ನಾಟಕವೆಂದು ನಾಮಕರಣ ಮಾಡಿಕೊಂಡ ಸವಿನೆನಪಿಗಾಗಿ ಪ್ರತಿ ವರ್ಷವೂ ನವೆಂಬರ್ ಒಂದನ್ನು ನಾಡ ಹಬ್ಬವಾಗಿ ಆಚರಿಸುತ್ತಿದ್ದಾರೆ. ಅದೇ ಉದ್ದೇಶದಿಂದ ಪ್ರಸ್ತುತ ಕಾರ್ಯಕ್ರಮವನ್ನು ೫೦ ರ ಸಂಭ್ರಮಾಚರಣೆಯಂದು ಆಚರಿಸುತ್ತಿದ್ದೇವೆ. ಈ ಭಾಷೆ ಅಳಿವು ಉಳಿವು ಕನ್ನಡಿಗರ ಕೈಯಲ್ಲಿಯೇ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಆರ್ ಎಂ. ಮಿರ್ದೆ, ಉಪ ಪ್ರಾಚಾರ್ಯ ಪ್ರೊ. ಎ.ಬಿ.ಪಾಟೀಲ, ಐಕ್ಯೂಎಸಿ ನಿರ್ದೇಶಕರು ಡಾ.ಪಿ.ಎಸ್.ಪಾಟೀಲ, ಡಾ. ಶ್ರೀನಿವಾಸ ದೊಡ್ಡಮನಿ, ಡಾ.ಉಷಾದೇವಿ ಹಿರೇಮಠ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ.ಉಷಾದೇವಿ ಹಿರೇಮಠ ನಿರೂಪಿಸಿದರು, ಪ್ರೊ.ಎಸ್ ಹೆಚ್ ಹೂಗಾರ ವಂದಿಸಿದರು.