ಆಲಮಟ್ಟಿ : ಆಂಗ್ಲ ಮಾದ್ಯಮದ ಶಾಲೆ ಇದು. ಆದರೂ ಕನ್ನಡ ಮೋಹ ಉಮ್ಮಳಿಸಿ ಚಿತ್ತಾರದ ರೂಪದಲ್ಲಿ ಪರಿಮಳಿಸಿತು. ಇಲ್ಲಿ ಕನ್ನಡ ರಾಜ್ಯೋತ್ಸವದ ಕಹಳೆ ಕಂಪಾಗಿ, ಇಂಪಾಗಿ, ತಂಪಾಗಿ ಮೂಡಿಬಂತು. ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗುರುಮಾತೆಯರು ಹಾಗೂ ಮಕ್ಕಳು ಕನ್ನಡ ಬಾವುಟ ಬಣ್ಣದ ಉಡುಪುಗಳನ್ನು ತೊಟ್ಟು ಕನ್ನಡ ಸಂಭ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕನ್ನಡ ಬೆಳಗಲಿ ಎಂಬ ಭಾವದಿಂದ ದೀಪಗಳನ್ನು ಹಚ್ಚಿ ಪ್ರಾಥಿ೯ಸಿದ ನೋಟ ಗಮನ ಸೆಳೆಯಿತು. ಇನ್ನೊಂದೆಡೆ ಹಳಕಟ್ಟಿ ಪ್ರೌಢಶಾಲೆಯ ಮುಖ್ಯ ಗುರು ಜಿ.ಎಂ.ಕೋಟ್ಯಾಳ ಅವರನ್ನು ಶಾಲಾವರಣದಲ್ಲಿ ಚಿಣ್ಣರು ಭೇಟಿ ಮಾಡಿ ಕನ್ನಡ ರಾಜ್ಯೋತ್ಸವದ ಸವಿ ಶುಭಾಶಯ ಹಂಚಿಕೊಂಡು ಖುಷಿಪಟ್ಟಿದ್ದು ವಿಶೇಷವಾಗಿತ್ತು.