ಸಿಂದಗಿ: ಕನ್ನಡ ನಾಡಿನಲ್ಲಿ ಕನ್ನಡವೇ ಪ್ರಥಮ, ಪ್ರಧಾನ, ಸಾರ್ವಭೌಮವಾಗಬೇಕು. ಉಳಿದ ಅನ್ಯ ಭಾಷೆಗಳು ಕನ್ನಡ ನೆಲದಲ್ಲಿ ಸೇವಕರಾಗಿ ಕೆಲಸ ಮಾಡಬೇಕು ಎಂದು ಎಚ್.ಜಿ.ಪಪೂ ಮಹಾವಿದ್ಯಾಲಯದ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.
ಬುಧವಾರದಂದು ನಗರದ ಬಸವ ಮಂಟಪದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಕನ್ನಡ ನಾಡನ್ನು ಕನ್ನಡ ನಾಡು, ಶ್ರೀಗಂಧದ ನಾಡು, ಕರುನಾಡ ನಾಡು, ಸಾಧು-ಸಂತರು, ದಾಸರು, ಶಿವಶರಣರು ಹಾಗೂ ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ. ಕನ್ನಡ ಅನ್ನದ ಭಾಷೆ, ಜೀವದ ಭಾಷೆ, ಪವಿತ್ರ ಭಾಷೆ, ಹೃದಯ ಭಾಷೆಯಾಗಿ ನಾವು ಕಾಣಬೇಕಾಗಿದೆ. ಏಕೆಂದರೆ ಆಂಗ್ಲದಲ್ಲಿ ಅನೇಕ ತಪ್ಪುಗಳನ್ನು ಕಾಣಬಹುದು ಆದರೆ ಕನ್ನಡ ಭಾಷೆ ಅಥವಾ ಪದದಲ್ಲಿ ಯಾವುದೇ ಒಂದು ತಪ್ಪನ್ನು ಕಾಣಲು ಸಾಧ್ಯವಿಲ್ಲ. ಕಾರಣ ಕನ್ನಡದ ಪ್ರತಿಯೊಂದ ಅಕ್ಷರ ಸಂಶೋಧನೆಯಿಂದ ಮೂಡಿ ಬಂದಿರುವ ಪದಗಳು. ನಾವೆಲ್ಲರೂ ನವೆಂಬರ್ ಕನ್ನಡಿಗರಾಗದೇ ನಂ: ೦೧ ಕನ್ನಡಿಗರಾಗೋಣ. ನಂ:೦೧ ಕನ್ನಡಿಗರಾದರೇ ಸಾವಿರ ಸಾವಿರ ವರ್ಷಗಳ ಸುದೀರ್ಘ ಇತಿಹಾಸವನ್ನು ನಾವೆಲ್ಲ ಕಾಣುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸ್ವತಂತ್ರ ಪೂರ್ವ ಮತ್ತು ಸ್ವತಂತ್ರದ ನಂತರ ಕರ್ನಾಟಕ ರಾಜ್ಯವನ್ನು ಏಕೀಕರಣ ಮಾಡಬೇಕು. ಈ ಅಖಂಡ ಕರ್ನಾಟಕವನ್ನು ಒಗ್ಗೂಡಿಸಿ ಈ ನೆಲದ ಮತ್ತು ಜಲದ ಅಭಿಮಾನವನ್ನು ನಮ್ಮ ಜನತೆಗೆ ವ್ಯಕ್ತ ಮಾಡಬೇಕೆನ್ನುವ ನಮ್ಮ ಹಿರಿಯರು ಮಾಡಿದ ತ್ಯಾಗ, ಬಲಿದಾನದ ದಿನವನ್ನು ಇಂದು ನಾವು ಕರ್ನಾಟಕ ರಾಜ್ಯೋತ್ಸವೆಂದು ಆಚರಣೆ ಮಾಡುತ್ತಿದ್ದೇವೆ. ಮಾತನಾಡುವ ಭಾಷೆ ಕನ್ನಡ, ಅನ್ನ ನೀಡುವ ಭಾಷೆ ಕನ್ನಡ. ಪ್ರತಿ ಮನೆ ಮನಗಳಲ್ಲಿ ಕನ್ನಡ ರಾರಾಜಿಸಲಿ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ ಸ್ವಾಗತಿಸಿದರು. ರವಿ ಗೋಲಾ ನಿರೂಪಿಸಿದರು.
ವೇದಿಕೆಯ ಮೇಲೆ ಸಿಪಿಐ ಡಿ.ಹುಲುಗಪ್ಪ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನವರ ಇದ್ದರು.
ಇದೇ ಸಂದರ್ಭದಲ್ಲಿ ಆಯ್.ಎ.ಮಕಂದಾರ, ಮಾಳು ಹೊಸುರ, ಪಿಎಸ್‌ಐ ಭೀಮಪ್ಪ ರಬಕವಿ, ಅಶೋಕ ಅಲ್ಲಾಪೂರ, ಆ.ಎಮ್.ನದಾಫ್, ಎ.ಆರ್. ಹೆಗ್ಗನದೊಡ್ಡಿ, ಸದ್ದಾಂ ಆಲಗೂರ, ಅಶೋಕ ಸುಲ್ಪಿ, ಸೇರಿದಂತೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಶಿಕ್ಷಕರು, ನಿವೃತ್ತ ಸೈನಿಕರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
Related Posts
Add A Comment