ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಐಆರ್‌ಬಿ ಸಿಬ್ಬಂದಿ ಅಭಿಮತ
ವಿಜಯಪುರ: ಸಿದ್ಧೇಶ್ವರ ಶ್ರೀಗಳ ಹೆಸರಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದಕ್ಕೂ ಸಾರ್ಥಕ ಎನಿಸುತ್ತದೆ. ಇಲ್ಲಿರುವ ಸುಂದರ ಪರಿಸರ, ಅದ್ಭುತವಾದ ವಾತಾವರಣ, ಪರಿಸರ ಸ್ನೇಹಿ ವ್ಯವಸ್ಥೆ, ಸುಚಿತ್ವ ಹಾಗೂ ನಗುಮೊಗದ ಸೇವೆಯನ್ನು ಕಂಡರೆ ಅರ್ಧ ಆರೋಗ್ಯದ ಸಮಸ್ಯೆ ವೈದ್ಯರನ್ನು ಕಾಣುವ ಮೊದಲೇ ಸರಿ ಹೋಗುತ್ತದೆ. ಹೀಗಾಗಿ ಇದನ್ನು ಆಸ್ಪತ್ರೆ ಎನ್ನುವುದಕ್ಕಿಂತಲೂ ಆಧ್ಯಾತ್ಮಿಕ ಅನುಭೂತಿಯ ತಾಣ ಎಂದರೂ ತಪ್ಪಾಗುವುದಿಲ್ಲ ಎನ್ನುವ ಭಾವನೆಯನ್ನು ವ್ಯಕ್ತ ಪಡಿಸಿದ ಇಂಡಿಯನ್ ರಿಸರ್ವ ಬೆಟಾಲಿಯನ್‌ನ ಸಿಬ್ಬಂಧಿಗಳು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಂಡು ಮನಸಾರೆ ಹೊಗಳಿದರು.
ಮುಂಬರಲಿರುವ ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ ಚುನಾವಣೆಗಳಿಗೆ ಕಾನೂನು ಸೂವ್ಯವಸ್ಥೆಯನ್ನು ಕಾಪಾಡಲು ಸಿದ್ಧಗೊಂಡಿರುವ ೨ ಕಂಪನಿ ಅಂದರೆ ೨೦೦ ಜನರಿರುವ ಇಂಡಿಯನ್ ರಿಸರ್ವ ಬೆಟಾಲಿಯನ್ ಸಿಬ್ಬಂಧಿಗಳಿಗೆಂದು ನಗರದ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಸಿಬ್ಬಂಧಿವರ್ಗ ಆಸ್ಪತ್ರೆಯ ಸಹೃದಯದ ಸೇವೆಯನ್ನು ಕಂಡು ಸಂತಸ ವ್ಯಕ್ತ ಪಡಿಸಿದರು. ನಮ್ಮಲ್ಲಿ ಬಹಳಷ್ಟು ಜನಗಳು ಸಿದ್ಧೇಶ್ವರ ಸ್ವಾಮೀಜಿಯವರ ಪರಮ ಭಕ್ತರಾಗಿದ್ದು ಅವರ ಹೆಸರಿನಲ್ಲಿ ಪ್ರಾರಂಭಿಸಲಾಗಿರುವ ಆಸ್ಪತ್ರೆಯ ಸೇವೆ ಹೇಗಿರುತ್ತದೆ ಎನ್ನುವುದನ್ನು ನೋಡುವ ಇಚ್ಛೆ ಬಹಳ ದಿನಗಳಿಂದ ಇತ್ತು. ಸಮಾಜಿಕ ಕಳಕಳಿಯುಳ್ಳ ಜೆಎಸ್‌ಎಸ್ ಈ ಮೊದಲು ಅರಕೇರಿಯಲ್ಲಿದ್ದ ನಮ್ಮ ಕ್ಯಾಂಪಸ್‌ಗೆ ಆಗಮಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುವ ಮೂಲಕ ನಮ್ಮ ಆರೋಗ್ಯದ ಬಗ್ಗೆ ಕಾಳಸಜಿ ವಹಿಸಿದ್ದರು. ಈ ಬಾರಿ ನಾವು ಚುನಾವಣಾ ಕಾರ್ಯಕ್ಕೆ ತೆರಳುತ್ತಿರುವುದರಿಂದ ಮತ್ತೊಮ್ಮೆ ಆರೋಗ್ಯ ತಪಾಸಣೆಗೆ ಒಳಗಾಗುವುದು ಅವಶ್ಯಕವಾಗಿದ್ದ ಕಾರಣ ಇಂದು ಆಸ್ಪತ್ರೆಗೆ ಆಗಮಿಸಿ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದು ಇಲ್ಲಿನ ಸೇವೆ ನಮಗೆಲ್ಲ ತೃಪ್ತಿ ನೀಡಿದೆ. ಪೂಜ್ಯರ ಹೆಸರಿನಷ್ಟೆ ಶುಭ್ರವಾದ ಸೇವೆಯನ್ನು ನೀಡುವ ಈ ಆಸ್ಪತ್ರೆ ಸದಾ ಹೀಗೆ ಜನ ಸೇವೆಯಲ್ಲಿ ತೊಡಗಲಿ ಇನ್ನೂ ಹೆಚ್ಚಿನ ಸೇವೆ ಇವರಿಂದ ಸಾರ್ವಜನಿಕರಿಗೆ ದೊರಕಲಿ ಎಂದು ಶಿಬಿರದಲ್ಲಿ ಪಲ್ಗೊಂಡಿದ್ದ ಸಿಬ್ಬಂಧಿ ವರ್ಗದವರು ಆಶಿಸಿದರು.
ಆಸ್ಪತ್ರೆಯ ತಜ್ಞವೈದ್ಯರುಗಳಾದ ಡಾ.ರಾಮಚಂದ್ರ ಸೊನಾವಲೆ, ಡಾ.ಶಿವಕುಮಾರ ಕತ್ತಿ, ಡಾ.ಶಿರೀಶ ಕನ್ನೂರ, ಡಾ.ರಾಕೇಶ ಪಾಟೀಲ್ ಅವರ ನೇತೃತ್ವದ ವೈದ್ಯರು ಹಾಗೂ ನರ್ಸಿಂಗ್ ತಂಡ ಉಚಿತ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಿಭಾಯಿಸಿತು. ಇವರ ಕಾರ್ಯಕ್ಕೆ ಐಆರ್‌ಬಿಯ ಮುಖ್ಯಸ್ಥರು ಹಾಗೂ ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಅಭಿನಂದಿಸಿದರು.