ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳೆಯರ ಧ್ವನಿಯನ್ನು ನಿರ್ಲಕ್ಷಿಸಿದಾಗ ಅದನ್ನು ಸಮಾಜದ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಸಮಾನತೆ ಕೇವಲ ಮಾತಿಗೆ ಸೀಮಿತವಾಗದೆ, ಜೀವನದಲ್ಲಿ ಪಾಲಿಸುವ ಮೌಲ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಸ್ನಾತಕ ವಿಭಾಗ ಹಾಗೂ ಬೆಂಗಳೂರಿನ ಗುಬ್ಬಿವಾಣಿ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಅವಳ ಹೆಜ್ಜೆ ಕಿರುಚಿತ್ರ ೨೦೨೬’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಿಂಗ ಸಂವೇದನೆ ಹಾಗೂ ಮಹಿಳಾ ಸಬಲೀಕರಣದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಮಹಿಳೆಯರನ್ನು ಪುರುಷರೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಉನ್ನತ ಶಿಕ್ಷಣದ ಮೂಲಕ ಪಡೆದ ಜ್ಞಾನವನ್ನು ಕೇವಲ ತಲೆಯಲ್ಲಿ ಇಟ್ಟುಕೊಳ್ಳದೆ, ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕು. ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿದ ಕಿರುಚಿತ್ರಗಳ ಮೂಲಕ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮಂಡ್ಯದ ಗುಬ್ಬಿವಾಣಿ ಟ್ರಸ್ಟ್ನ ‘ಅವಳ ಹೆಜ್ಜೆ’ ಕಾರ್ಯಕ್ರಮದ ನಿರ್ದೇಶಕಿ ಶಾಂತಲಾ ದಾಮ್ಲೆ ಮಾತನಾಡಿ, ಮಹಿಳಾ ಸಬಲೀಕರಣವೆಂದರೆ ಮಾನಸಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗುವುದಾಗಿದೆ. ಮಹಿಳೆಯರು ತಮ್ಮ ಅನುಭವ ಹಾಗೂ ವಿಚಾರಗಳನ್ನು ತಾವೇ ಹೇಳಿಕೊಳ್ಳಲು ಅವಕಾಶ ಕಲ್ಪಿಸುವುದು ಅಗತ್ಯ ಎಂದರು.
ಮಹಿಳೆಯರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಮಾನಸಿಕ ಧೈರ್ಯದ ಜತೆಗೆ ದೈಹಿಕ ಆರೋಗ್ಯ ಮತ್ತು ಶಕ್ತಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಮುಂದಿನ ಪೀಳಿಗೆಯ ಹೆಣ್ಣುಮಕ್ಕಳು ಇಂದಿನ ಸಮಸ್ಯೆಗಳನ್ನು ಎದುರಿಸುವಂತೆ ಮಹಿಳೆಯರು ಸಕ್ರಿಯವಾಗಿ ಸಬಲರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುಬ್ಬಿವಾಣಿ ಟ್ರಸ್ಟ್ನ ಔಟ್ರೀಚ್ ಸಂಯೋಜಕಿ ಉಷಾ ಸಂಪತ್ ಕುಮಾರ್, ಸ್ನಾತಕ ವಿಭಾಗದ ವಿಶೇಷಾಧಿಕಾರಿ ಪ್ರೊ. ಡಿ.ಎಂ. ಮದರಿ, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ್ ಕಾಕಡೆ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತಿತರಿದ್ದರು.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮೀದೇವಿ ವೈ. ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕಿ ಡಾ. ಭಾಗ್ಯಶ್ರೀ ದೊಡಮನಿ ಹಾಗೂ ಡಾ. ಸರೋಜಾ ಸಂತಿ ಅತಿಥಿಗಳನ್ನು ಪರಿಚಯಿಸಿದರು, ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿ ಪ್ರಾರ್ಥಿಸಿದರು, ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ನಿರೂಪಿಸಿ, ವಂದಿಸಿದರು.

