ಇಂಡಿಯಲ್ಲಿ ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ್ ಪೋದ್ದಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿದ್ಯಾರ್ಥಿಗಳು ಸರ್ಕಾರದಿಂದ ಲಭ್ಯವಿರುವ ವಿವಿಧ ವಿದ್ಯಾರ್ಥಿವೇತನಗಳ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಹಾಗೂ ಅಗತ್ಯ ದಾಖಲೆಗಳ ಕುರಿತು ಸರಿಯಾದ ಮಾಹಿತಿ ಹೊಂದಿರಬೇಕು. ಜೊತೆಗೆ ನಾಗರಿಕ ಸೇವಾ ಪರೀಕ್ಷೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂದಿನಿಂದಲೇ ಕ್ರಮಬದ್ಧವಾಗಿ ಸಿದ್ಧತೆ ನಡೆಸಬೇಕು ಎಂದು ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ್ ಪೋದ್ದಾರ ಹೇಳಿದರು.
ಅವರು ಗುರುವಾರ ನಗರದ ಜಿ.ಆರ್. ಗಾಂಧಿ ಕಲಾ, ವೈ.ಎ. ಪಾಟೀಲ ವಾಣಿಜ್ಯ ಹಾಗೂ ಎಂ.ಪಿ. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎಸ್ಸಿ ಮತ್ತು ಎಸ್ಟಿ ಕಲ್ಯಾಣ ಘಟಕ ಹಾಗೂ ವಿದ್ಯಾರ್ಥಿವೇತನ ಘಟಕದ ವತಿಯಿಂದ ವಿಜಯಪುರದ ಮಾನವ ವಿಕಾಸ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿವೇತನದ ಸೌಲಭ್ಯವು ಆರ್ಥಿಕವಾಗಿ ನೆರವಾಗುವುದರ ಜೊತೆಗೆ, ಉನ್ನತ ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆ ಎಂದ ಅವರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರಿಯಾಗಿಸಿಕೊಂಡು ಆರಂಭದಿಂದಲೇ ಯೋಜಿತ ರೀತಿಯಲ್ಲಿ ಅಧ್ಯಯನ ಮಾಡಬೇಕು. ದಿನನಿತ್ಯದ ಓದು, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಪತ್ರಿಕೆ ಓದುವ ಅಭ್ಯಾಸ, ನಿರಂತರ ಅಧ್ಯಯನ ಹಾಗೂ ಸಮಯ ನಿರ್ವಹಣೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ಪ್ರಮುಖವಾಗಿವೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್. ಜಿ. ಸಣ್ಣಕ್ಕಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಬೆಳವಣಿಗೆಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಸಹಾಯಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮಾನವ ವಿಕಾಸ ಕೇಂದ್ರ, ವಿಜಯಪುರದ ಕಾರ್ಯದರ್ಶಿ ಜ್ಞಾನೇಶ್ವರ ಎಸ್. ಧೂಳಖೇಡ, ಜಯಪ್ರಸಾದ್ ಡಿ., ವಿ.ಎ. ಕೋರವಾರ ಉಪಸ್ಥಿತರಿದ್ದರು.

