ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣಾ ತೀರದ ಖ್ಯಾತ ನೀರಾವರಿ ಹೋರಾಟಗಾರ, ನಿಡಗುಂದಿಯ ಬಸವರಾಜ ಕುಂಬಾರ (೬೪) ಗುರುವಾರ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
೧೯೯೫-೨೦೦೦ರ ಕಾಲಘಟ್ಟದಲ್ಲಿ ಕೃಷ್ಣಾ ತೀರದ ರೈತರಲ್ಲಿ ನೀರಾವರಿ ಜಾಗೃತಿ ಮೂಡಿಸಲು ‘ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ’ ಸ್ಥಾಪಿಸಿ ರೈತ ಚಳವಳಿಗೆ ಭದ್ರ ಬುನಾದಿ ಹಾಕಿದವರಲ್ಲಿ ಕುಂಬಾರ ಪ್ರಮುಖರು.
೨೦೦೮-೧೩ರಲ್ಲಿ ಶಾಸಕ ಎಂ.ಬಿ. ಪಾಟೀಲ ಅವರೊಂದಿಗೆ ಕೆರೆ ತುಂಬಿಸುವ ಹೋರಾಟದಲ್ಲಿ ಸಂಚಾಲಕರಾಗಿ ಅವಳಿ ಜಿಲ್ಲೆಗಳಲ್ಲಿ ಸಂಘಟನೆ ಮಾಡಿದರು. ಕೃಷ್ಣಾ ಕಾಡಾ ಅಧ್ಯಕ್ಷರಾಗಿಯೂ ಕುಂಬಾರ ಅಲ್ಪಾವಧಿ ಸೇವೆ ಸಲ್ಲಿಸಿದ್ದರು.

