ಶಾಸಕ ಯಶವಂತ್ರಾಯಗೌಡ ಪಾಟೀಲರ ರಾಜಿನಾಮೆ ಒತ್ತಡ & ರೈತರ ಹೋರಾಟಕ್ಕೆ ದೊರೆತ ಮನ್ನಣೆ | ಕೊನೆಗೂ ಸ್ಪಂದಿಸಿದ ಸರ್ಕಾರ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಜಿಲ್ಲೆಯ ರೈತರ ಸಂಕಷ್ಟ, ಮಳೆಯ ಕೊರತೆ ಹಾಗೂ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಒತ್ತಾಯಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿದೆ.
ಜಿಲ್ಲೆಯ ೧೧ ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಜಿಲ್ಲೆಯ ಗಡಿ ತಾಲ್ಲೂಕುಗಳಾದ ಇಂಡಿ ಹಾಗೂ ಚಡಚಣ ತಾಲ್ಲೂಕುಗಳನ್ನು ಮಾತ್ರ ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿರಲಿಲ್ಲ. ತಮ್ಮದೇ ಸರಕಾರದಲ್ಲಿ ತಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಮನನೊಂದು ಶಾಸಕ ಯಶವಂತ್ರಾಯಗೌಡ ಪಾಟೀಲ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇದರ ಬೆನ್ನಲ್ಲೇ ಸರ್ಕಾರ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದರು. ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿದ್ದು, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಕೊರತೆ ಉಂಟಾಗಿತ್ತು. ಇಂಡಿ, ಚಡಚಣ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು, ವಿವಿಧ ಸಾಮಾಜಿಕ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ನಿರಂತರವಾಗಿ ಬರ ಘೋಷಣೆಗೆ ಆಗ್ರಹಿಸುತ್ತಿದ್ದರು.
ರೈತರ ಪರವಾಗಿ ಹೋರಾಟ
ಶಾಸಕ ಯಶವಂತರಾಯಗೌಡ ಪಾಟೀಲ ಅವರು ವಿಧಾನಸಭೆ ಹಾಗೂ ಸರ್ಕಾರದ ವಿವಿಧ ಹಂತಗಳಲ್ಲಿ ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಪ್ರಸ್ತಾಪಿಸಿ ಬರ ಘೋಷಣೆಗೆ ಒತ್ತಾಯಿಸಿದ್ದರು. ಸರ್ಕಾರ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿ ಹೋರಾಟದ ಕಾವು ಹೆಚ್ಚಿಸಿದ್ದರು. ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಜಿಲ್ಲೆಯ ಪರಿಸ್ಥಿತಿಯನ್ನು ಮರುಪರಿಶೀಲಿಸಿದ ರಾಜ್ಯ ಸರ್ಕಾರ ಇಂಡಿ, ಚಡಚಣ ಸೇರಿದಂತೆ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಈ ಘೋಷಣೆಯಿಂದ ರೈತರಿಗೆ ವಿವಿಧ ರೀತಿಯ ಪರಿಹಾರ ಸೌಲಭ್ಯಗಳು ದೊರೆಯುವ ನಿರೀಕ್ಷೆ ಮೂಡಿದೆ.
ಜಿಲ್ಲೆಯ ಜನಪ್ರತಿನಿಧಿಗಳು, ರೈತ ಸಂಘಟನೆಗಳು ಹಾಗೂ ಸಾರ್ವಜನಿಕರ ನಿರಂತರ ಹೋರಾಟದ ಫಲವಾಗಿ ವಿಜಯಪುರ ಜಿಲ್ಲೆ ಕೊನೆಗೂ ಬರಪೀಡಿತ ಜಿಲ್ಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದು, ಇದೀಗ ಸರ್ಕಾರದ ನೆರವು ರೈತರ ಮನೆಬಾಗಿಲಿಗೆ ತಲುಪುವ ನಿರೀಕ್ಷೆ ಮೂಡಿದೆ.
ರೈತರಲ್ಲಿ ಸಂತಸ
ಬರ ಘೋಷಣೆಯ ಸುದ್ದಿಯಿಂದ ಜಿಲ್ಲೆಯ ರೈತರಲ್ಲಿ ಸಂತಸ ವ್ಯಕ್ತವಾಗಿದೆ. ಬರ ಪರಿಹಾರ, ಬೆಳೆ ನಷ್ಟ ಪರಿಹಾರ, ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಕೆಲಸದ ದಿನಗಳು ಹಾಗೂ ಜಾನುವಾರುಗಳಿಗಾಗಿ ಮೇವು-ನೀರಿನ ವ್ಯವಸ್ಥೆ ಸೇರಿದಂತೆ ಸರ್ಕಾರದಿಂದ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.
ಬರ ಘೋಷಣೆ ಮಾತ್ರ ಸಾಕಾಗುವುದಿಲ್ಲ. ರೈತರಿಗೆ ಶೀಘ್ರ ಪರಿಹಾರ ವಿತರಣೆ, ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಮೇವು ಪೂರೈಕೆ ಹಾಗೂ ಕೃಷಿ ಸಾಲ ಮರುಪಾವತಿಗೆ ವಿನಾಯಿತಿ ಸೇರಿದಂತೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.

