ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.೨೯ರಂದು ಸಾವಿರಾರು ರೈತರ ಭಾಗವಹಿಸುವ ‘ಹುಬ್ಬಳ್ಳಿ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹುಬ್ಬಳ್ಳಿಗೆ ತೆರಳಿ ‘ಹುಬ್ಬಳ್ಳಿ ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಜಗದೇವಿ ಬಿರಾದಾರ ಮನವಿ ಮಾಡಿದರು..
ಸಿಂದಗಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಗಾರು ಮಳೆ ಕೊರತೆ ಹಾಗೂ ಬೆಳೆ ಇಳುವರಿ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಬ್ಬಿಗೆ ಪ್ರತಿ ಟನ್ ೫,೫೦೦ದರ ನಿಗದಿಪಡಿಸಬೇಕು, ಸಕ್ಕರೆಗೆ ಕ್ವಿಂಟಲ್‌ಗೆ ೬,೦೦೦ ಬೆಲೆ ನಿಗದಿಪಡಿಸಬೇಕು ಹಾಗೂ ಕೇಂದ್ರ ಸರ್ಕಾರವು ಮೂರು-ನಾಲ್ಕು ರಾಜ್ಯಗಳಿಂದ ಶೇ.೧೦೦ರಷ್ಟು ಎಥನಾಲ್ ಖರೀದಿಸುತ್ತಿದ್ದು, ಕರ್ನಾಟಕದಿಂದ ಮಾತ್ರ ಶೇ.೩೦ರಷ್ಟು ಖರೀದಿಸುತ್ತಿದೆ. ಕರ್ನಾಟಕದಿಂದಲೂ ಶೇ.೧೦೦ರಷ್ಟು ಎಥನಾಲ್ ಖರೀದಿಸಬೇಕು. ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಮಿತಿಯ ರಾಜ್ಯ ಕಾರ್ಯದರ್ಶಿ ಪರಮಾನಂದ ಬಗಲಿ ಮಾತನಾಡಿ, ಬರದಿಂದ ಸಂಕಷ್ಟಕ್ಕೀಡಾದ ರೈತರಿಗೆ ಪ್ರತಿ ಎಕರೆಗೆ ೫೦ಸಾವಿರ ಪರಿಹಾರ ನೀಡಬೇಕು ಹಾಗೂ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶರಣಗೌಡ ಪಾಟೀಲ, ಸಿದ್ಧನಗೌಡ ಪಾಟೀಲ, ಆನಂದ ಕಂಟಿಗೊಂಡ, ಸಂತೋಷ ಜೋಗೂರ ಸೇರಿದಂತೆ ಇತರರು ಇದ್ದರು.

