ಗಾಢನಿದ್ರೆಯಲ್ಲಿ ಪುರಸಭೆ | ಚರಂಡಿ ನೀರಿನ ದುರ್ವಾಸನೆ | ಡೇಂಗ್ಯೂ ಪ್ರಕರಣ ದಾಖಲು
*– ರಶ್ಮಿ ನೂಲಾನವರ*
ಸಿಂದಗಿ: ಪಟ್ಟಣವನ್ನು ಅಭಿವೃದ್ದಿ ಮಾಡಬೇಕಿರುವ ಪುರಸಭೆಯು ಗಾಢನಿದ್ರೆಯಲ್ಲಿದೆ. ಎಚ್ಚೆತ್ತುಕೊಂಡು ಕಾರ್ಯ ಮಾಡಬೇಕಿರುವ ಅಧಿಕಾರಿಗಳು ನಿಷ್ಕ್ರೀಯ. ಎಲ್ಲದರ ಮಧ್ಯದಲ್ಲಿ ಸಿಂದಗಿ ಪಟ್ಟಮದ ಹಲವೆಡೆ ಚರಂಡಿ ನೀರು ರಸ್ತೆಗೆ ಬರುತ್ತಿದೆ. ನಿತ್ಯ ಆರೋಗ್ಯದ ಸಮಸ್ಯೆ ಹಾಗೂ ನಾನಾ ಕಾಯಿಲೆಗಳ ಆಗಮದಂತಿರುವ ಚರಂಡಿಗಳ ಕರ್ಮಕಥೆ ಇದಾಗಿದೆ.
ಪಟ್ಟಣದ ಬಸ್ ನಿಲ್ದಾಣ ಸುತ್ತಮುತ್ತ, ವಿವೇಕಾನಂದ ವೃತ್ತ ಬಳಿ, ವಿದ್ಯಾನಗರ ವಾಟರ್ ಟ್ಯಾಂಕ ಹಿಂಬದಿ, ಹಳೆ ತಹಸಿಲ್ದಾರ ಕಾರ್ಯಾಲಯದ ಸುತ್ತಲೂ, ಸ್ತ್ರೀಶಕ್ತಿ ಭವನದ ಹಿಂಭಾಗ, ವಿದ್ಯಾನಗರ ಹಿಂಭಾಗದ ಕೊಳಚೆ ಪ್ರದೇಶ, ಸೋಂಪುರ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಚರಂಡಿಗಳ ನೀರಿನಿಂದ ದುರ್ವಾಸನೆ ಬೀರುತ್ತಿವೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ಹೇಳತೀರದಾಗಿದೆ.
ಕನಕದಾಸ ಬಡಾವಣೆಯಿಂದ ಮೋರಟಗಿ ನಾಕಾ:
ಪಟ್ಟಣದ ಕನಕದಾಸ ಬಡಾವಣೆಯಿಂದ ಮೋರಟಗಿ ನಾಕಾವರೆಗೆ ದೊಡ್ಡ ಚರಂಡಿಯು ಡೋಹರ ಕಕ್ಕಯ್ಯ ವೃತ್ತಕ್ಕೆ ಸೇರುತ್ತದೆ. ಆದರೆ ಮಾರ್ಗ ಮಧ್ಯದಲ್ಲಿ ಚರಂಡಿ ಒಳಗೆ ಪ್ಲಾಸ್ಟಿಕ್ ಮತ್ತು ಕಸದ ರಾಶಿ ತುಂಬುಕೊಂಡಿದ್ದರೂ ಪುರಸಭೆ ಮಾತ್ರ ತೆಗೆಯದೆ ಹಾಗೇ ಬಿಟ್ಟಿದೆ. ಇದರ ಪಕ್ಕದಲ್ಲಿಯೇ ಸರ್ಕಾರಿ ಶಾಲೆ, ಮಸೀದಿ, ಬಾವಿ, ಅಂಗನವಾಡಿ ಕೇಂದ್ರ, ಮಹಿಳಾ ಸಾರ್ವಜನಿಕ ಶೌಚಾಲಯ ಹಾಗೂ ಕೊಳವೆ ಬಾವಿಗಳಿವೆ. ಮತ್ತು ಸಾರ್ವಜನಿಕರು ಮೂಗು ಮುಚ್ಚಿಕೊಂಡೆ ನಿತ್ಯ ಸಂಚಾರ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಡೇಂಗ್ಯೂ ಪ್ರಕರಣ: ಚರಂಡಿಗಳ ನೀರು ಮತ್ತು ವಿಪರೀತವಾದ ಕೊಳಚೆಯಿಂದ ಸಿಂದಗಿ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಡೇಂಗ್ಯೂ ಪ್ರಕರಣಗಳು ದಾಖಲಾಗಿವೆ. ಹಿಂತಹ ಅನೇಕ ಪ್ರಕರಣಗಳು ನಡೆಯುತ್ತಿದ್ದರು ಮುನ್ನೇಚ್ಚರಿಕೆಯ ಕ್ರಮಗಳು ಮಾತ್ರ ಜಾರಿಯಾಗುತ್ತಿಲ್ಲ. ತಾಲೂಕಿನಲ್ಲಿ ಇಲ್ಲಿಯವರೆಗೂ ೩೮ ಡೇಂಗ್ಯೂ ಪ್ರಕರಣಗಳು ದಾಖಲಾಗಿವೆ. ಅದರಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂಬುದು ಆರೋಗ್ಯ ಇಲಾಖೆಯಿಂದ ಮಾಹಿತಿ ತಿಳಿದು ಬಂದಿದೆ.
ಕಸದ ರಾಶಿ: ಭಾಗಶಃ ಪಟ್ಟಣವು ಕಸ-ಕೊಚ್ಚೆಯಿಂದಾವೃತಗೊಂಡಿದ್ದರಿಂದ ಇಲ್ಲಿ ಹಂದಿಗಳ ಹಾವಳಿಯೂ ವಿಪರೀತವಾಗಿದೆ. ಕಸದ ರಾಶಿಯನ್ನು ಹಂದಿಗಳು ಕೆದರಿ ರಸ್ತೆಯುದ್ದಕ್ಕೂ ವ್ಯಾಪಿಸುವುದು ಇಲ್ಲಿ ಮಾಮೂಲು ಸಂಗತಿ. ಪ್ರತಿದಿನವು ಅಂದಾಜು ೪೦-೫೦ ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದನ್ನು ಸಮರ್ಪಕವಾಗಿ ಸಾಗಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗುತ್ತಿದ್ದು, ಇದರಿಂದ ದಿನೇ ದಿನೇ ಕಸದ ರಾಶಿಯು ಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಿದೆ.
ನೀರಿನ ಸಂಸ್ಕರಣ ಘಟಕದ ಹಿಂಬದಿ ಕಸದ ರಾಶಿ:
ವಿದ್ಯಾನಗರ ೨ನೆಯ ಕ್ರಾಸ್ ವಾಟರ್ ಟ್ಯಾಂಕ್ ಹಿಂಬಾಗದ ಪ್ರದೇಶದ ಕಸದ ರಾಶಿಯಿಂದ ಕೂಡಿಕೊಂಡಿದೆ. ಅಲ್ಲಿರುವ ಕಸ ಗಾಳಿ ಬಿಟ್ಟಾಗ ಹಾರಿ ಹೋಗಿ ನೀರು ಶುದ್ದಿಕರಿಸುವ ಪ್ರದೇಶದಲ್ಲಿ ಬೀಳುತ್ತದೆ. ಅದೇ ನೀರು ನಮಗೆ ಸರಬರಾಜು ಆಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.