ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ರಾಜ್ಯದ ವಿವಿಧ ಸರ್ಕಾರಿ ವಸತಿ ನಿಲಯಗಳಲ್ಲಿ ಅಡುಗೆ, ಸ್ವಚ್ಛತೆ, ಕಾವಲು ಸೇರಿದಂತೆ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಶಾಸನಬದ್ಧವಾಗಿ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಸಂಯುಕ್ತ ಆಲಮಟ್ಟಿ ಕೆಬಿಜೆಎನ್‌ಎಲ್ ಗಾರ್ಡನ್ ಡಿ ಗ್ರೂಪ್ ನೌಕರರ ಸಂಘದ ವತಿಯಿಂದ ಶುಕ್ರವಾರ ಪತ್ರ ಚಳುವಳಿ ನಡೆಸಲಾಯಿತು.
ಕಾರ್ಮಿಕರು ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆಗಳ ನಡುವೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಸಮರ್ಪಕವಾಗಿ ಪಾವತಿಸದಿರುವುದರಿಂದ ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಂಘದ ಮುಖಂಡರು ತಿಳಿಸಿದರು.
ವಸತಿ ನಿಲಯ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ವೇತನ ಪಾವತಿಸಬೇಕು. ವೇತನ ಚೀಟಿ ನೀಡುವುದರೊಂದಿಗೆ ಪಿಎಫ್, ಇಎಸ್‌ಐ ಸೇರಿದಂತೆ ಕಾರ್ಮಿಕರಿಗೆ ದೊರೆಯಬೇಕಾದ ಎಲ್ಲ ಶಾಸನಬದ್ಧ ಸೌಲಭ್ಯಗಳನ್ನು ಖಾತರಿಪಡಿಸಬೇಕು ಎಂದು ಪತ್ರ ಚಳುವಳಿಯ ಮೂಲಕ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಲಾಯಿತು.
ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಪರಿಗಣಿಸಿ ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಂಘದ ಮುಖಂಡರು ಎಚ್ಚರಿಸಿದರು.
ಸಂಘದ ಮುಖಂಡರಾದ ದ್ಯಾಮಣ್ಣ ಬಿರಾದರ, ಎಸ್.ಸಿ. ಕುಂಬಾರ, ಅಖಂಡೇಶ ಬಡಿಗೇರ, ದಶರಥ, ಮೀನಾಕ್ಷಿ ರಾಠೋಡ, ಯಲ್ಲವ್ವ ಮೇಟಿ, ಮಕಬುಲ್ ಬಾಗವಾನ, ಚಂದ್ರು ಲಮಾಣಿ, ಲಕ್ಷ್ಮಣ್ಣ, ಸಂಗಮೇಶ ಯರನಾಳ, ಸುಸಲವ್ವ ಪಾಟೀಲ, ರಫೀಕ್ ಅಥಣಿ, ಮಹಾದೇವಯ್ಯ ಹಿರೇಮಠ, ರುಕ್ಮಿಣಿ ಮಾದರ, ರಮೇಶ ಅಸ್ಕಿ, ಹುಸೇನ ವಾಲಿಕಾರ,
ಸಂಗಮೇಶ ಯರನಾಳ, ಸುಸಲವ್ವ ಪಾಟೀಲ, ರಫೀಕ್ ಅಥಣಿ, ಮಹಾದೇವಯ್ಯ ಹಿರೇಮಠ, ರುಕ್ಮಿಣಿ ಮಾದರ, ರಮೇಶ ಅಸ್ಕಿ, ಹುಸೇನ ವಾಲಿಕಾರ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಭಾಗವಹಿಸಿದ್ದರು.

