ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಾಲೋಟಗಿಯ ಡಾ. ಎಂ.ಎನ್.ವಾಲಿ ಅವರ ವ್ಯಕ್ತಿತ್ವ ಅಧ್ಯಯನ ಪೂರ್ಣ ಹಾಗೂ ಯುವಕರಿಗೆ ಪ್ರೇರಣಾದಾಯಕವಾಗಿದೆ. ಅವರು ಜಾನಪದ ತಜ್ಞರಾಗಿ ಹಾಗೂ ಸಾಹಿತಿಯಾಗಿ ಪ್ರಾಧ್ಯಾಪಕರಾಗಿ, ಕನ್ನಡ ಪರ ಹೋರಾಟಗಾರರಾಗಿ ಹಾಗೂ ಅಪಾರ ಸಾಹಿತ್ಯ ಕೃತಿಗಳ ಮೂಲಕ ಸಾರಸ್ವತ ಲೋಕ ಶ್ರೀಮಂತ ಗೊಳಿಸಿದ್ದಾರೆ ಎಂದು ನಾಡಿನ ಜಾನಪದ ತಜ್ಞ ಸಿಂದಗಿಯ ಡಾ ಎಂ.ಎಂ ಪಡಶೆಟ್ಟಿ ಹೇಳಿದರು.
ಶನಿವಾರದಂದು ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ‘ಡಾ ಎಂ ಎನ್ ವಾಲಿ ಬದುಕು ಮತ್ತು ಸಾಹಿತ್ಯ’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಸಾಲೋಟಗಿ ಒಂದು ಐತಿಹಾಸಿಕ ಗ್ರಾಮ ಹಾಗೂ ಪ್ರಾಚೀನ ವಿದ್ಯಾ ಕೇಂದ್ರವಾಗಿತ್ತು. ಹಾಗಾಗಿ ಅಲ್ಲಿ ಹುಟ್ಟಿ ಬೆಳೆದ ವಾಲಿ ಅವರು ನಾಡಿನ ಕೆಲಸ ಮಾಡಿ ಸಾಲೋಟಗಿಗೆ ಹೆಸರು ತಂದು ಕೊಟ್ಟರು ಎಂದು ಅಭಿಪ್ರಾಯ ಪಟ್ಟರು.
ಸಾಹಿತಿ ಗೀತಯೋಗಿ ಸಮಾರೋಪ ಭಾಷಣ
ಮಾಡಿ, ಡಾ. ಎಂ. ಎನ್ ವಾಲಿ ಸಾಲೋಟಗಿಯ ಹೆಮ್ಮೆ ಆಗಿದ್ದಾರೆ ಮತ್ತು ಸಿದ್ಧೇಶ್ವರ ಮಹಾಸ್ವಾಮಿಗಳನ್ನು ಸಾಲೋಟಗಿಗೆ ತಂದು ಇಲ್ಲಿ ಅವರ ಕುರಿತಾದ ವಿಚಾರ ಹರಡಿಸಲು ಕಾರಣರಾದವರಲ್ಲಿ ಡಾ.ಎಂ. ಎನ್ ವಾಲಿ ಅವರು ಒಬ್ಬರು ಎಂದು ಹೇಳಿದರು.
ಡಾ ಚನ್ನಪ್ಪ ಕಟ್ಟಿ, ಸಿ ಎಂ ಬಂಡಗರ, ರಾಘವೇಂದ್ರ ಕುಲಕರ್ಣಿ, ವೈ ಜಿ ಬಿರಾದಾರ, ಶ್ರೀಧರ ಹಿಪ್ಪರಗಿ, ರಾಚು ಕೊಪ್ಪ, ಪತ್ರಕರ್ತ ನಿಂಗಣ್ಣ ಬಿರಾದಾರ, ಡಾ ರಾಜಶ್ರೀ ಮಾರನೂರ, ಸಂಗನಗೌಡ ಹಚಡದ, ಅನಿತಾ ಅಳಗುಂಡಗಿ, ರೇಖಾ ನಾಗಠಾಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶಿಕ್ಷಕಿ ಸರೋಜಿನಿ ಮಾವಿನಮರ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕ ಸಂತೋಷ ಬಂಡೆ ನಿರೂಪಿಸಿ ವಂದಿಸಿದರು.

