೮.೪೧ ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮೆಲ್ಲರ ಬದ್ಧತೆಯಾಗಿದೆ. ಪುರಸಭೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಪಟ್ಟಣ ಹಾಗೂ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ೨ ಕೋಟಿ ರೂ. ವೆಚ್ಚದಲ್ಲಿ ಸೇತುವೆ ಹಾಗೂ ಸಿಸಿ ರಸ್ತೆ ನಿರ್ಮಾಣ ಹಾಗೂ ಪುರಸಭೆ ಎಸ್‌ಎಫ್‌ಸಿ ವಿಶೇಷ ಅನುದಾನ ೫ ಕೋಟಿ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ ಅಭಿವೃದ್ದಿ, ೨೫ ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ದಿ, ೧.೧೬ ಕೋಟಿ ರೂ. ವೆಚ್ಚದಲ್ಲಿ ವಿವಿಧ ಬಡಾವಣೆಗಳಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭುಮಿ ಪೂಜೆ ನೆರವೇರಿಸಿ ನಂತರ ಶರಣಮುತ್ಯಾರ ಮಂದಿರ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ತಾಳಿಕೋಟೆ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಮೃತ ಯೋಜನೆಯಡಿ ಹಲವು ಹಂತಗಳಲ್ಲಿ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈಗಾಗಲೇ ಮಂಜೂರಾತಿ ದೊರೆತಿದೆ. ಅಮೃತ ಯೋಜನೆಯಡಿ ತಾಳಿಕೋಟೆಗೆ ೨೪><೭ ಕುಡಿಯುವ ನೀರು ಪೂರೈಕೆಗೆ ಅಗತ್ಯವಾದ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ. ತಾಳಿಕೋಟೆಯಿಂದ ಮೂಕೀಹಾಳ ಕಡೆಗೆ ಸಾಗುವ ರಸ್ತೆಯ ಅಭಿವೃದ್ಧಿಯ ಜೊತೆಗೆ ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಸೇತುವೆಯ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಸನೂರು-ದಿಂಡವಾರ ನಾಲತವಾಡ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ೩೫೦ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ರಸ್ತೆ, ಸೇತುವೆ, ನೀರಾವರಿ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಭೂಸ್ವಾಧೀನ ಸೇರಿದಂತೆ ಒಟ್ಟಾರೆ ಸುಮಾರು ೩೮೦ ಕೋಟಿ ಮೊತ್ತದ ಯೋಜನೆಗಳ ಪ್ರಸ್ತಾವನೆಗಳು ಹಾಗೂ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಈ ಸಮಯದಲ್ಲಿ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಪ್ರಭುಗೌಡ ಮದರಕಲ್ಲ, ಸೈಯದ ಶಕೀಲ ಅಹ್ಮದ ಖಾಜಿ, ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಹಿಬೂಬ ಚೋರಗಸ್ತಿ, ಸಿದ್ದನಗೌಡ ಪಾಟೀಲ(ನಾವದಗಿ), ಪುರಸಭೆ ಮುಖ್ಯಾಧಿಕಾರಿ ಸುನಿಲ್ ಪಾಟೀಲ, ಚಿನ್ನುಧನಿ ನಾಡಗೌಡ, ಶರಣುಧನಿ ದೇಶಮುಖ, ಬಿ ಎನ್ ಹಿಪ್ಪರಗಿ, ಸಿ.ಎಸ್.ಮಾಳಿ, ವೀರೇಶಗೌಡ ಬಾಗೇವಾಡಿ, ಗುತ್ತಿಗೆದಾರ ಭೀಮನಗೌಡ ಪಾಟೀಲ, ಶಿವರಾಜ ಗುಂಡಕನಾಳ, ಸಂಗನಗೌಡ ಅಸ್ಕಿ, ಮಹಿಬೂಬ ಕೇಂಭಾವಿ, ಮುನ್ನಾ ಅರ್ಜುಣಗಿ, ಮೊದಲಾದವರು ಉಪಸ್ಥಿತರಿದ್ದರು.

