ಉತ್ನಾಳ ಗ್ರಾಮದಲ್ಲಿ ಶಾಲೆಯ ಮುಖ್ಯದ್ವಾರ ಹಾಗೂ ಶಾಲಾ ಕೊಠಡಿ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: (ಬಸವನ ಬಾಗೇವಾಡಿ–ಉತ್ನಾಳ) ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದ್ದು ಕೇವಲ ಶಾಲಾ ಪಠ್ಯದ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಮತ್ತು ಸ್ವಾಸ್ಥ್ಯ ಸಾಧ್ಯವಿಲ್ಲ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅಭಿಪ್ರಾಯಪಟ್ಟರು.
ಅವರು ಬಸವನ ಬಾಗೇವಾಡಿಯ ಉತ್ನಾಳ ಗ್ರಾಮದಲ್ಲಿ ನಿನ್ನೆ ಜರುಗಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯದ್ವಾರ ಮತ್ತು ನೂತನ ಕೊಠಡಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶಾಲಾ ಶಿಕ್ಷಣವು ಜೀವನೋಪಾಯಕ್ಕೆ ಆಧಾರವಾದರೆ ಸಂಸ್ಕಾರದ ಶಿಕ್ಷಣವು ಸಮಾಜಮುಖಿ ಬದುಕಿಗೆ ನೆರವಾಗುತ್ತದೆ ಎಂದರು.
ಲಕ್ಷೆೋಪಲಕ್ಷ ರೂ. ತಮ್ಮ ದುಡಿಮೆಯ ಹಣವನ್ನು ಖರ್ಚು ಮಾಡಿ ತಾವು ಕಲಿತ ಉತ್ನಾಳದ ಶಾಲೆಯ ಮುಖ್ಯದ್ವಾರ ನಿರ್ಮಾಣಕ್ಕೆ ನೆರವಾದ ವಿಜಯಪುರದ ಪ್ರತಿಷ್ಠಿತ ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಚೇರ‍್ಮನ್ ಬಸವರಾಜ ಅವರ ಸೇವೆಯನ್ನು ಶ್ಲಾಘಿಸಿದರು.
ಮುಖ್ಯ ಅತಿಥಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಈ ದೇಶದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ. ಶಾಲೆಯು ಜೀವಂತ ದೇವರುಗಳ ದೇವಾಲಯವಾಗಿದ್ದು ಇಂಥ ದೇಗುಲಗಳಲ್ಲಿ ಮಾತ್ರ ಮೌಲ್ಯಯುತ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇತ್ತೀಚಿಗೆ ದೈವಾಧೀನರಾದ ಸಾದ್ವಿ ನೀಲಮ್ಮ ಶಾಂತಪ್ಪ ಕೌಲಗಿ ಅವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಈ ಶಾಲೆಯ ಮುಖ್ಯ ದ್ವಾರ ನಿರ್ಮಾಣದ ರೂವಾರಿ ಶ್ರೀ ಬಸವರಾಜ ಕೌಲಗಿ ಅಂಥವರೂ ಕೂಡಾ ಉತ್ನಾಳದ ಈ ಪುಟ್ಟ ಊರಿನ ಸರಕಾರಿ ಶಾಲೆಯಲ್ಲೇ ಓದಿದ ಜೀವಂತ ದೇವರಾಗಿದ್ದಾರೆ ಎಂದರು.
ಶಾಲಾ ಕೊಠಡಿ ಉದ್ಘಾಟನೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಕಲಬುರ್ಗಿ, ಪ್ರೌಢಶಾಲಾ ಶಿಕ್ಷಕ, ವಾಗ್ಮಿ ಅಶೋಕ ಹಂಚಲಿ ಮಾತನಾಡಿದರು.
ಸಮಾರಂಭದಲ್ಲಿ ಕೊಡುಗೈ ದಾನಿ ಬಸವರಾಜ ಕೌಲಗಿ ಅವರು ಉತ್ನಾಳದ ಸರಕಾರಿ ಶಾಲೆಯನ್ನು ದತ್ತು ಪಡೆಯುವ ವಾಗ್ದಾನ ಮಾಡಿದರು. ಎಲ್ಲಾ ಪಾಲಕರು ತಪ್ಪದೇ ತಮ್ಮ ಮಕ್ಕಳಿಗೆ ಅಕ್ಷರ ಸಂಸ್ಕಾರ ನೀಡಲು ಮರೆಯಬಾರದು ಎಂದರು.
ಸಮಾರಂಭದ ವೇದಿಕೆಯಲ್ಲಿ ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ರಾಜಶೇಖರ ಕೌಲಗಿ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಬಿ. ಬಾರೀಕಾಯಿ, ಶಿಕ್ಷಣ ಸಂಯೋಜಕ ಷಣ್ಮುಖ ಅಂಬಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಸಾನಿದ್ಯವನ್ನು ನಿವೃತ್ತ ಮುಖ್ಯ ಶಿಕ್ಷಕ ವೇ.ಚಂದ್ರಶೇಖರಯ್ಯ ಹಿರೇಮಠ, ಉತ್ನಾಳ ಕೋರಿ ಮಠದ ಹಣಮಂತ ಮಹಾರಾಜ, ಲಕ್ಷಿದೇವಿ ಆರಾಧಕ ವೇ.ಸಂಗಮೇಶ ಹೀರೆಮಠ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ.ಸಿ ಯ ಮಹಾಂತೇಶ ಹತ್ತರಕಿಹಾಳ ಅತಿಥಿ-ಅಭ್ಯಾಗತರನ್ನು ಸನ್ಮಾನಿಸಿ ಗೌರವಿಸಿದರು. ಮುಖ್ಯ ಶಿಕ್ಷಕ ಬಿ. ಬಿ. ಬಾಗೇವಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರು, ಎಸ್.ಡಿ.ಎಂ.ಸಿ ಯ ಉಪಾಧ್ಯಕ್ಷರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

