ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಹಕ್ಕೆ ವಯಸ್ಸಾಗುತ್ತದೆಯೇ ಹೊರತು ಮನಸ್ಸಿಗಲ್ಲ. ವಯಸ್ಸು ಕೇವಲ ಒಂದು ಸಂಖ್ಯೆಯಾಗಿದ್ದು, ಹಿರಿಯ ನಾಗರಿಕರು ತಮ್ಮ ಸುದೀರ್ಘ ಜೀವನದ ಅನುಭವ ಹಾಗೂ ಜ್ಞಾನವನ್ನು ಕಿರಿಯರೊಂದಿಗೆ ಹಂಚಿಕೊಳ್ಳುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಎಸ್. ಹಾಗರಗಿ ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-೨೦೨೬ರ ಅಂಗವಾಗಿ ನಗರದ ನಗರದ ಕನಕದಾಸ ಬಡಾವಣೆಯ ಈಜುಕೊಳದ ಹತ್ತಿರದ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಹಕ್ಕುಗಳು ಹಾಗೂ ಕ್ಷೇಮಾಭಿವೃದ್ಧಿಗೆ ಕಾನೂನು ಸದಾ ಬೆಂಬಲವಾಗಿ ನಿಲ್ಲಲಿವೆ. ಹಿರಿಯರು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವೃದ್ಧಾಪ್ಯವನ್ನು ಸವಾಲಾಗಿ ಸ್ವೀಕರಿಸುವ ಬದಲು ಉತ್ಸಾಹದಿಂದ ಜೀವನವನ್ನು ಆನಂದಿಸಬೇಕು ಎಂದು ಅವರು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಮಾತನಾಡಿ, ಹಿರಿಯರ ಅಪಾರ ಅನುಭವ ಹಾಗೂ ಕಿರಿಯರ ಉತ್ಸಾಹ ಒಂದಾಗುವುದರಿಂದ ಸಮಾಜದ ಪ್ರಗತಿಗೆ ಮತ್ತಷ್ಟು ಬಲ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ನಿರ್ಮಲ ಸುರಪೂರ, ವಿಜಯಪುರ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಪಿ. ಬಿರಾದಾರ, ನವರಸಪೂರದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿ ವೈ.ಆರ್. ನಂದಿಹಳ್ಳಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ ಕೆ. ಸೇರಿದಂತೆ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

