ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಉದ್ಯಮ ರಂಗದಲ್ಲಿ ಸರ್ಕಾರಗಳು ರಾಜಕೀಯ ದ್ವೇಷ ಸಾಧಿಸುವುದು ಸರಿಯಲ್ಲ. ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಗರದ ವಿಶಾಲ ಸೌಹಾರ್ದ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಂ.ಆರ್.ಎನ್ ಗ್ರುಫ್ ವತಿಯಿಂದ ನಮ್ಮ ರಾಜ್ಯದಲ್ಲಿ ಬಯೋಪ್ಲಾಸ್ಟಿಕ್ ಕಾರ್ಖಾನೆ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು ಆದರೆ “ನಮಗೆ ಕರ್ನಾಟಕದಲ್ಲಿ ಬಯೋ ಪ್ಲಾಸ್ಟಿಕ್ ಕಾರ್ಖಾನೆ ನಿರ್ಮಿಸಲು ಸರ್ಕಾರ ಅನುಮತಿ ನೀಡಲಿಲ್ಲ. ಆದರೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳು ತಾವಾಗಿಯೇ ಮುಂದೆ ಬಂದು ನಮಗೆ ಆಹ್ವಾನ ನೀಡಿ, ಅನುಮತಿ ನೀಡಿವೆ. ಅಲ್ಲಿ ಸುಮಾರು ೬,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಬಯೋ ಪ್ಲಾಸ್ಟಿಕ್ ಕಾರ್ಖಾನೆಗಳು ಸಿದ್ಧಗೊಳ್ಳುತ್ತಿವೆ. ನಮ್ಮ ರಾಜ್ಯದ ಉದ್ಯಮಿಗಳಿಗೆ ಇಲ್ಲಿಯೇ ಅವಕಾಶ ನೀಡುವ ಬದಲು, ಬೇರೆ ದೇಶ ಅಥವಾ ಬೇರೆ ರಾಜ್ಯದವರಿಗೆ ಅನುಕೂಲ ಮಾಡಿಕೊಡುವುದನ್ನು ಬಿಟ್ಟು ಕನ್ನಡಿಗರಿಗೇ ಮೊದಲ ಆದ್ಯತೆ ಮತ್ತು ಅನುಕೂಲ ಕಲ್ಪಿಸಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಲಾಭಕ್ಕಾಗಿ ಹೊಸ ದರ ನೀತಿಯನ್ನು ಪ್ರಸ್ತಾಪಿಸಿದ ನಿರಾಣಿ, “ಸಾಮಾನ್ಯ ಜನರಿಗೆ ಒಂದು ದರ ಮತ್ತು ದೊಡ್ಡ ಕಂಪನಿಗಳಿಗೆ ಮತ್ತೊಂದು ದರ ನಿಗದಿಪಡಿಸಬೇಕು. ಸಾಮಾನ್ಯರಿಗೆ ಪ್ರತಿ ಕೆಜಿಗೆ ರೂ. ೪೦ ಹಾಗೂ ಶ್ರೀಮಂತ ಕಾರ್ಖಾನೆ/ಕಂಪನಿಗಳಿಗೆ ರೂ. ೬೦ ರಂತೆ ಸಕ್ಕರೆ ಖರೀದಿಗೆ ಸರ್ಕಾರ ಆದೇಶ ಹೊರಡಿಸಿದರೆ, ಕಬ್ಬು ಬೆಳೆಗಾರರಿಗೂ ಮತ್ತು ಸಕ್ಕರೆ ಉದ್ಯಮಕ್ಕೂ ಹೆಚ್ಚಿನ ಲಾಭ ತರಲು ಸಾಧ್ಯವಾಗುತ್ತದೆ” ಎಂದರು.
ತಮ್ಮ ಉದ್ಯಮದ ಯಶೋಗಾಥೆಯನ್ನು ಹಂಚಿಕೊಂಡ ಅವರು, “ಕೇವಲ ೧೦ ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಪ್ರಾರಂಭವಾದ ಸಕ್ಕರೆ ಕಾರ್ಖಾನೆ, ಇಂದು ೨೫,೦೦೦ ಕೋಟಿ ರೂಪಾಯಿ ಬಂಡವಾಳದ ಬೃಹತ್ ಉದ್ಯಮವಾಗಿ ಬೆಳೆದಿದೆ. ಪ್ರಸ್ತುತ ನಮ್ಮ ಸಂಸ್ಥೆಯಲ್ಲಿ ೭೨,೦೦೦ ಕ್ಕೂ ಹೆಚ್ಚು ಜನ ಉದ್ಯೋಗ ಮಾಡುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ನಿರಾಣಿ ಗ್ರೂಪ್ ಒಟ್ಟು ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ” ಎಂದು ತಿಳಿಸಿದರು.
ಇದೇ ವೇಳೆ ಯುವ ಪದವೀಧರರಿಗೆ ಕಿವಿಮಾತು ಹೇಳಿದ ಮುರುಗೇಶ್ ನಿರಾಣಿ, ಯುವಕರು ಕೈಗಾರಿಕೆಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು, ಪುಸ್ತಕಗಳನ್ನು ಓದಬೇಕು. ಸರ್ಕಾರದ ಸಹಾಯಧನ ಮತ್ತು ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯಮ ನಿರ್ಮಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

