ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಯಿಂದ ಪತ್ರಿಕಾ ಪ್ರಕಟಣೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕೇಂದ್ರ ಸರ್ಕಾರದ ನಿಯಮಾವಳಿಗಳನ್ವಯ ರಾಜ್ಯ ಸರ್ಕಾರವು ಸಿಂದಗಿ ಹಾಗೂ ಆಲಮೇಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಪ್ರಸಕ್ತ ವರ್ಷ ಸಿಂದಗಿ ಹಾಗೂ ಆಲಮೇಲ ತಾಲೂಕುಗಳು ತೀವ್ರ ಮಳೆ ಕೊರತೆಯನ್ನು ಎದುರಿಸಿದ್ದು, ಇದರಿಂದ ಎರಡೂ ತಾಲೂಕುಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲಕಾಲಕ್ಕೆ ಲಭ್ಯವಾಗುವ ಸ್ಯಾಟಲೈಟ್ ಮಾಹಿತಿ ಸೇರಿದಂತೆ ಕೇಂದ್ರ ಸರ್ಕಾರದ ನಿಯಮಾವಳಿಗಳಲ್ಲಿ ನಿಗದಿಪಡಿಸಿರುವ ವಿವಿಧ ಮಾನದಂಡಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ. ಅದರಂತೆ ಸಿಂದಗಿ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಹಾಗೂ ಆಲಮೇಲ ತಾಲೂಕನ್ನು ಮಧ್ಯಮ ಬರಪೀಡಿತ ತಾಲೂಕು ಎಂದು ವರ್ಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ನೇತೃತ್ವದಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಆದ್ಯತೆಯಾಗಿದ್ದು, ರೈತರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಬರಪೀಡಿತ ತಾಲೂಕುಗಳ ಘೋಷಣೆಗೆ ಆಗ್ರಹಿಸಿ ವಿವಿಧ ತಾಲೂಕುಗಳಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟಗಳನ್ನು ಸ್ಥಗಿತಗೊಳಿಸುವಂತೆ ಶಾಸಕ ಅಶೋಕ ಮನಗೂಳಿ ಮನವಿ ಮಾಡಿದ್ದಾರೆ.

