ಅಧಿಕಾರಿಗಳ ಸಭೆಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಇಂಡಿ ತಾಲೂಕನ್ನು ಬರಗಾಲವನ್ನಾಗಿ ಸರಕಾರ ಸೆ.೩೦ ರೊಳಗೆ ಘೋಷಿಸುವ ಸಾದ್ಯತೆ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ನಗರದ ತಾ.ಪಂ ಸಬಾಭವನದಲ್ಲಿ ಎಲ್ಲ ಅಧಿಕಾರಿಗಳಿಂದ ನಡೆದ ಕುಡಿಯುವ ನೀರಿನ ಕುರಿತು ಚರ್ಚೆಯಲ್ಲಿ ಮಾತನಾಡಿದರು.
ಇಂಡಿ ತಾಲೂಕಿನ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳು ಮತ್ತು ಕಂದಾಯ ಮಂತ್ರಿಗಳಿಗೆ ಮನವರಿಕೆ ಮಾಡಿ ಕೊಟ್ಟಿದ್ದು ಇಂಡಿ, ಚಡಚಣ ಮತ್ತು ತಾಳಿಕೋಟಿ ಬರ ತಾಲೂಕು ಘೋಷಿಸುವ ಸಾಧ್ಯತೆ ಇದೆ ಎಂದರು.
ಕೃಷ್ಣಾ ಕಾಲುವೆಯ ನೀರಿನ ಮೂಲಕ ತಾಲೂಕಿನಲ್ಲಿರುವ ಕೆರೆಗಳನ್ನು ತುಂಬಲಾಗುತ್ತಿದ್ದು ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಆಗದು, ಆದರೆ ಭೀಮಾ ನದಿಯಿಂದ ನೀರು ಬಿಡುವ ಕುರಿತು ಮಹಾರಾಷ್ಟç ಸರಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಗಿದ್ದು ಅವರು ನೀರು ಬಿಟ್ಟರೆ ಭೀಮಾ ದಂಡೆಯ ಗ್ರಾಮಗಳಿಗೂ ನೀರಿನ ತೊಂದರೆ ಯಾಗದು ಎಂದರು.
ನಗರಕ್ಕೆ ಜಲಧಾರೆ ಯೋಜನೆ ಆದರೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಆಗುತ್ತದೆ. ಜೆಜೆಎಂ ಕಾರ್ಯ ತೀವ್ರ ಆದಲ್ಲಿ ನಗರಕ್ಕೆ ನೀರಿನ ತೊಂದರೆ ಆಗದು, ಆದರೂ ಲೋಣಿ ಕೆರೆಯಿಂದ ಇಂಡಿ ನಗರಕ್ಕೆ ನೀರು ತರುವ ಶಾಶ್ವತ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಕೆ.ಆನಂದ ಮಾತನಾಡಿ ತಾಲೂಕಿನಲ್ಲಿ ಮಳೆಯ ಮುನ್ಸುಚನೆ ಇಲ್ಲ, ಸೆ.೩೦ ರ ವರೆಗೆ ಮಳೆಯ ಅವಕಾಶವಿದೆ. ಆದರೂ ಕೃಷ್ಣಾ ಕಾಲುವೆಯಿಂದ ಎಲ್ಲ ಕೆರೆಗಳನ್ನು ತುಂಬಲಾಗುತ್ತಿದ್ದು ಡಿ. ೩೦ ರ ವರೆಗೆ ಕುಡಿಯುವ ನೀರಿನ ತೊಂದರೆ ಆಗುವದಿಲ್ಲ ಎಂದರು.ಮೇವಿನ ಕೊರತೆ ಇಲ್ಲ ಆದರೂ ಮುಂಜಾಗೃತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.ಉಷ್ಣಾಂಶ ಜಾಸ್ತಿ ಇದ್ದು ರೈತರ ಮೇವಿನ ಬೇಡಿಕೆ ಕುರಿತು ಆಗುತ್ತದೆ. ಅದಕ್ಕಾಗಿ ಎಲ್ಲ ಮುಂಜಾಗೃತೆ ಕ್ರಮ ಕೈಕೊಳ್ಳಲಾಗುತ್ತಿದೆ ಎಂದರು.
ಜಿ.ಪಂ ಮುಖ್ಯ ಕಾರ್ಯದರ್ಶಿ ರಿಷಿ ಆನಂದ ಮಾತನಾಡಿ, ಈಗಾಗಲೇ ಮೂರು ಹಂತಗಳಲ್ಲಿ ಮೊದಲ ಹಂತದಲ್ಲಿ ೩೦ ಲಕ್ಷದಲ್ಲಿ, ಎರಡನೆಯ ಹಂತದಲ್ಲಿ ೮.೭೫ ಲಕ್ಷ ರೂ ಮೂರನೇಯ ಹಂತದಲ್ಲಿ ಒಂದು ಕೋಟಿ ರೂ ಅನುದಾನ ನೀಡಿದ್ದು ಗ್ರಾ.ಪಂ ಬಯಸಿದರೆ ಅನುದಾನ ನೀಡುವದಾಗಿ ತಿಳಿಸಿದರು.
ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರಮಾತನಾಡಿ ಇಲ್ಲಿಯ ವರೆಗೆ ೪೧೨ ಮೀ ಮೀ ಮಳೆ ಆಗಬೇಕಾಗಿತ್ತು, ೨೭೯ ಮೀ ಮೀ ಮಳೆ ಆಗಿ ೩೨ ಮೀ ಮೀ ಮಳೆ ಕೊರತೆ ಇದೆ, ಮುಂಗಾರು ಬೆಳೆ ಅದರಲ್ಲೂ ಕಬ್ಬು ಎಲ್ಲೂ ಸರಿಯಾಗಿ ಬೆಳೆದಿಲ್ಲ, ೪೨ ಸಾವಿರ ರೈತರು ಬೆಳೆ ವಿಮೆ ಮಾಡಿದ್ದು ಮಳೆ ಯಿಲ್ಲದೆ ಹಿಂಗಾರು ಬೆಳೆಗೂ ಕೊರತೆ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಹೆಸ್ಕಾ ಎಸ್.ಎ, ಬಿರಾದಾರ ಮತ್ತು ಎಸ್.ಆರ್ ಮೆಂಡೆಗಾರ ಮಾತನಾಡಿ ಮಳೆಯ ಕೊರತೆ ಕಾರಣ ತಾಲೂಕಿನಲ್ಲಿ ೨೦ ಸಾವಿರ ಮೆಗಾವ್ಯಾಟ್ ಸಪ್ಟೆಂಬರ ನಲ್ಲಿ ವಿದ್ಯುತ್ ಬಳಕೆಯಾಗಿದೆ. ಈ ಹಿಂದೆ ಇಷ್ಟು ಪ್ರಮಾಣದಲ್ಲಿ ಎಂದೂ ಬಳಕೆ ಆಗಿರಲಿಲ್ಲ ಎಂದರು.
ವೇದಿಕೆಯ ಮೇಲೆ ಕಂದಾಯ ಉಪ ವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಡಿ.ವಾಯ್ ಎಸ್ ಪಿ ಸದಾಶಿವ ಕಟ್ಟಿಮನಿ ಮತ್ತಿತರರಿದ್ದರು.
ಸಭೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

