ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಇಡೀ ಜೀವನವನ್ನೇ ಭಾರತೀಯ ಜನತಾ ಪಕ್ಷ ಸಂಘಟನೆಗಾಗಿ ಮುಡುಪಾಗಿರಿಸಿದ್ದಾರೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರ ಪ್ರಮುಖ ಎಂಬುದು ಇಡೀ ಕಾರ್ಯಕರ್ತ ಬಂಧುಗಳಿಗೆ ಗೊತ್ತಿದೆ, ಶಾಸಕ ಯತ್ನಾಳರು ಆಧಾರ ರಹಿತ ಟೀಕೆ ಮಾಡಿದರೆ ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಯಾವ ಧಕ್ಕೆಯೂ ಆಗುವುದಿಲ್ಲ, ಯಡಿಯೂರಪ್ಪ ಅವರ ಬಗ್ಗೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಮಾತನಾಡುವುದನ್ನು ಶಾಸಕ ಯತ್ನಾಳ ಅವರು ನಿಲ್ಲಿಸಲಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಹೇಳದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿ.ಎಸ್. ಯಡಿಯೂರಪ್ಪ ಎಂದರೆ ಅವರು ಮಾಸ್ ಲೀಡರ್. ಇಡೀ ರಾಜ್ಯ ಅಷ್ಟೇ ಅಲ್ಲ ರಾಷ್ಟ್ರಕ್ಕೆ ಅವರ ಹೆಸರು ಚಿರಪರಿಚಿತವಾಗಿದೆ, ಕೃಷಿ ಬಜೆಟ್ ಮೊದಲಾದ ಐತಿಹಾಸಿಕ ನಿರ್ಧಾರ ಕೈಗೊಂಡ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಸಹ ಶಾಸಕರಿಗೆ ಇಲ್ಲ. ಯತ್ನಾಳರು ಎಷ್ಟೋ ನೋವು ನೀಡಿದರೂ ಸಹ ಮಗನ ಸಮಾನ ಎಂದು ತಿಳಿದು ಓರ್ವ ತಂದೆಯ ಸ್ಥಾನದಲ್ಲಿ ನಿಂತು ಪುನಃ ಯಡಿಯೂರಪ್ಪ ಸಾಹೇಬರು ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು, ಆಗ ಯತ್ನಾಳರೇ ಯಡಿಯೂರಪ್ಪ ಅವರನ್ನು ತಮ್ಮ ಗುರು ಎಂದು ಹೇಳಿದ್ದೂ ಇದೆ, ಈಗ ಅವರ ವಿರುದ್ದವೇ ವಾಗ್ದಾಳಿ ನಡೆಸುವುದು, ಅವರ ಕಾರ್ ಡಿಸೇಲ್ ಹಾಕಿಸಿದ್ದು ನಾನೇ ಎಂದು ತಲೆ ಬುಡವಿಲ್ಲದ ಹೇಳಿಕೆ ನೀಡುವುದು ಯತ್ನಾಳ ಅವರ ಕೀಳು ಮಟ್ಟದ ವ್ಯಕ್ತಿತ್ವ ತೋರಿಸುತ್ತದೆ, ಬಿ.ವೈ. ವಿಜಯೇಂದ್ರ ಯುವಕರು, ಪಕ್ಷ ರಾಜ್ಯಾಧ್ಯಕ್ಷರಾಗಿ ತಮ್ಮದೇ ರೀತಿ ಪಕ್ಷವನ್ನು ಉತ್ಸಾಹದಿಂದ ಸಂಘಟನೆ ಮಾಡುತ್ತಿದ್ದಾರೆ, ಹೀಗಾಗಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ನಾನು ಸಹ ಬಿಜೆಪಿಯಲ್ಲಿಯೇ ಇರಬೇಕು ಎಂಬ ಹತಾಶ ಭಾವನೆಯಿಂದ ಹಾಗೂ ಮತ್ತೆ ಹೇಗಾದರೂ ಮಾಡಿ ಪಕ್ಷಕ್ಕೆ ಸೇರಲು ಯತ್ನಾಳ ಈ ನಾಟಕ ಮಾಡುತ್ತಿದ್ದಾರೆ ಎಂದು ರಜಪೂತ ಹೇಳಿದ್ದಾರೆ.
ಹಿಂದುತ್ವದ ಪಾಠ ಯತ್ನಾಳರಿಂದ ಕಲಿಯಬೇಕಿಲ್ಲ, ನಾನು ಹಿಂದೂತ್ವವಾದಿ,ಇತರ ಧರ್ಮೀಯರನ್ನು ತೆಗಳಲು ಹಿಂದೂ ಸಂಸ್ಕೃತಿ ಅನುಮತಿ ನೀಡಲ್ಲ, ಹಿಂದೂತ್ವದ ಸಂಸ್ಕೃತಿ ಬಹುತ್ವದ ಸಂಗತಿ, ಎಲ್ಲರನ್ನೂ ಭಾವೈಕ್ಯತೆಯಿಂದ ಕಾಣುವ ಸಂಸ್ಕೃತಿ, ಈ ಸಂಸ್ಕ್ರತಿ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಯತ್ನಾಳ ಅವರು ಹೇಗೆ ಹಿಂದೂ ನಾಯಕರಾಗಲು ಸಾಧ್ಯ ಎಂದು ರಜಪೂತ ಪ್ರಶ್ನಿಸಿದ್ದಾರೆ.

