ಚಡಚಣದ ಪ್ರಮುಖ ಬೀದಿಗಳಲ್ಲಿ ಪೊಲೀಸರಿಂದ ಜಾಗೃತಿ ಮೆರವಣಿಗೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯನ್ನು ಶಾಂತಿ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಆಚರಿಸುವಂತೆ ಮತ್ತು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಚಡಚಣ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಸಿಬ್ಬಂದಿಯಿಂದ ಗುರುವಾರ ಜಾಗೃತಿ ಮೆರವಣಿಗೆ ನಡೆಸಲಾಯಿತು.
ಚಡಚಣ ಸಿಪಿಐ ಪರಶುರಾಮ ಮನಗೂಳಿ ಹಾಗೂ ಪಿಎಸ್‌ಐ ಅರವಿಂದ ಅಂಗಡಿ ಅವರ ನೇತೃತ್ವದಲ್ಲಿ ನಡೆದ ಜಾಗೃತಿ ಮೆರವಣಿಗೆಯಲ್ಲಿ ಗಣೇಶೋತ್ಸವ ಸಮಿತಿಗಳ ಮುಖಂಡರು ಹಾಗೂ ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದರು.
ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು. ಡಿಜೆಗಳಲ್ಲಿ ಇಂಪಾದ ಹಾಗೂ ಮನರಂಜನಾತ್ಮಕ ಹಾಡುಗಳನ್ನು ಮಾತ್ರ ಪ್ರಸಾರ ಮಾಡಬೇಕು. ಯಾವುದೇ ಕೋಮು ಪ್ರಚೋದಕ, ಅಶಾಂತಿಗೆ ಕಾರಣವಾಗುವ ಅಥವಾ ಭಾವನೆಗಳಿಗೆ ಧಕ್ಕೆ ತರುವ ಹಾಡುಗಳನ್ನು ಪ್ರಸಾರ ಮಾಡಬಾರದು ಎಂದು ಗಣೇಶೋತ್ಸವ ಸಮಿತಿಗಳ ಮುಖಂಡರಿಗೆ ಪೊಲೀಸರು ಸ್ಪಷ್ಟ ಎಚ್ಚರಿಕೆ ನೀಡಿದರು.
ನಿಯಮಗಳನ್ನು ಉಲ್ಲಂಘಿಸಿ ಡಿಜೆ ಹಾಗೂ ಧ್ವನಿವರ್ಧಕಗಳನ್ನು ಬಳಸಿದಲ್ಲಿ ಡಿಜೆ ಮತ್ತು ಸೌಂಡ್ ಸಿಸ್ಟಮ್‌ಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಪರಶುರಾಮ ಮನಗೂಳಿ ಹಾಗೂ ಪಿಎಸ್‌ಐ ಅರವಿಂದ ಅಂಗಡಿ ಎಚ್ಚರಿಸಿದರು.
ಪಟ್ಟಣದ ವಾರ್ಡ್ ನಂ.7ರಲ್ಲಿ 202020 ಅಡಿ ವಿಸ್ತೀರ್ಣದ ಗಣೇಶ ವಿಸರ್ಜನಾ ಹೊಂಡವನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳು ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಇದೇ ಹೊಂಡದಲ್ಲಿ ನಡೆಸುವಂತೆ ಪೊಲೀಸರು ಸೂಚಿಸಿದರು.
ಗಣೇಶೋತ್ಸವವು ಎಲ್ಲರ ಹಬ್ಬವಾಗಿದ್ದು, ಪರಸ್ಪರ ಸಹೋದರತ್ವ, ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಂಡು ವಿಸರ್ಜನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪೊಲೀಸರು ಮನವಿ ಮಾಡಿದರು.

