ಚಡಚಣ ಏತ ನೀರಾವರಿ ಯೋಜನೆ ದುರುಪಯೋಗ ಆರೋಪ | ಅಕ್ರಮ ಪಂಪ್‌ಸೆಟ್ ತೆರವುಗೊಳಿಸಲು ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದ ಕಟ್ಟಕಡೆಯ ಗ್ರಾಮಗಳಾದ ಶಿರಾಡೋಣ ಹಾಗೂ ಹಾಲಹಳ್ಳಿ ಗ್ರಾಮದ ರೈತರಿಗೆ ಚಡಚಣ ಏತ ನೀರಾವರಿ ಯೋಜನೆಯ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಯೋಜನೆಯ ಪೈಪ್‌ಲೈನ್ ಒಡೆದು ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ನೀರು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಗಳ ರೈತರು ಬುಧವಾರ ಚಡಚಣ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವಿಕರಿಸಿ ಮಾತನಾಡಿದ ಚಡಚಣ ಉಪ ತಹಶೀಲ್ದಾರ ಕೆ ವಾಯ್ ಹೊಸಮನಿ ಶಿರಾಡೋನ ಹಾಗೂ ಹಾಲಹಳ್ಳಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೂಡಲೆ ಮೇಲಾಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಎಚ್.ಎಸ್. ಬನಸೋಡೆ, ಚಡಚಣ ಏತ ನೀರಾವರಿ ಯೋಜನೆಯ ನೀರನ್ನು ಅಕ್ರಮವಾಗಿ ಬಳಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡು, ಯೋಜನೆಯ ನೀರು ಅರ್ಹ ರೈತರ ಜಮೀನುಗಳಿಗೆ ತಲುಪುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ–ಮಹಾರಾಷ್ಟ್ರ ಗಡಿಭಾಗವಾಗಿರುವುದರಿಂದ ಮಹಾರಾಷ್ಟ್ರದ ಕೆಲ ರೈತರು ನೀರಾವರಿ ಯೋಜನೆಯ ಪೈಪ್‌ಲೈನ್ ಒಡೆದು ಅಕ್ರಮವಾಗಿ ಪಂಪ್‌ಸೆಟ್ ಅಳವಡಿಸಿಕೊಂಡು ತಮ್ಮ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಇದರಿಂದ ಶಿರಾಡೋಣ ಹಾಗೂ ಹಾಲಹಳ್ಳಿ ಗ್ರಾಮದ ರೈತರಿಗೆ ನೀರು ತಲುಪುತ್ತಿಲ್ಲ ಎಂದು ಅವರು ದೂರಿದರು.
ರೈತರು ಈಗಾಗಲೇ ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಸಚಿವರ ಗಮನಕ್ಕೆ ಸಮಸ್ಯೆಯನ್ನು ತಂದಿದ್ದರೂ, ಸಮಸ್ಯೆ ಬಗೆಹರಿದಿಲ್ಲ. ನೀರಿಲ್ಲದೆ ರೈತರ ಪರಿಸ್ಥಿತಿ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿದೆ. ಈ ಹಿನ್ನೆಲೆಯಲ್ಲಿ ಶಿರಾಡೋಣ ಗ್ರಾಮದ ರೈತರು ಸ್ವತಃ ಚಡಚಣದಿಂದ ಶಿರಾಡೋಣ ಗ್ರಾಮದ ಗಡಿಭಾಗದವರೆಗೆ ನೀರಾವರಿ ಯೋಜನೆಯ ಪೈಪ್‌ಲೈನ್ ಪರಿಶೀಲನೆ ನಡೆಸಿ, ಅಕ್ರಮ ಬಳಕೆಯ ಕುರಿತು ಜಿಪಿಎಸ್ ದಾಖಲೆ, ಛಾಯಾಚಿತ್ರ ಹಾಗೂ ವಿಡಿಯೊಗಳನ್ನು ಸಂಗ್ರಹಿಸಿರುವುದಾಗಿ ತಿಳಿಸಿದರು.
ಇದರೊಂದಿಗೆ ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತದ ರಾಮಪುರ ವಿಭಾಗದ ವ್ಯಾಪ್ತಿಗೆ ಬರುವ ಚಡಚಣ ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ನೀರು ಪೂರೈಕೆಗೆ ವೇಳಾಪಟ್ಟಿ ನಿಗದಿಪಡಿಸಬೇಕು ಎಂದು ರೈತರು ಒತ್ತಾಯಿಸಿದರು.
ಅಧಿಕಾರಿಗಳು ಮನವಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸದಿದ್ದರೆ ಶಿರಾಡೋಣ ಹಾಗೂ ಹಾಲಹಳ್ಳಿ ಗ್ರಾಮದ ರೈತರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಬಿರಾದಾರ, ರವಿಕಾಂತ ಪೂಜಾರಿ, ಸಂತೋಷ ಖರಾತ, ಪೀರಪ್ಪ ಖರಾತ, ನೆನೆಪ್ಪ ಬಿರಾದಾರ, ಶ್ರೀಶೈಲ ಖರಾತ, ಶಿವರಾಜ, ಸಂತೋಷ ಪೂಜಾರಿ ಸೇರಿದಂತೆ ಶಿರಾಡೋಣ ಹಾಗೂ ಹಾಲಹಳ್ಳಿ ಗ್ರಾಮದ ರೈತರು ಉಪಸ್ಥಿತರಿದ್ದರು.
“ಚಡಚಣ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು ರೈತರ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸುವೆ.”
– ರಮೇಶ ಜಿಗಜಿಣಗಿ
ಸಂಸದರು

