ಸಚಿವ ಎಂ.ಬಿ.ಪಾಟೀಲರ ಜನ್ಮದಿನದ ಅಂಗವಾಗಿ ತಿಕೋಟಾದಲ್ಲಿ ಕ್ರಿಕೆಟ್ ಪಂದ್ಯಾವಳಿ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ ಎ.ಬಿ.ಜತ್ತಿ ಕಾಲೇಜಿನ ಆವರಣದಲ್ಲಿ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮವನ್ನು ಶ್ರೀ ಎ.ಬಿ.ಜತ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಎ.ಹೊಸಟ್ಟಿ, ಉಪಪ್ರಾಚಾರ್ಯ ಜಗದೀಶಗೌಡ ಪಾಟೀಲ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಎಸ್.ತೋಳನೂರ , ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ನಂತರ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಪಿ.ಎಸ್.ತೋಳನೂರ ಅವರು ಮಾತನಾಡಿ, ನಮ್ಮ ಬಿ .ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರು, ರಾಜ್ಯ ಕಂಡ ಪ್ರಬುದ್ಧ ರಾಜಕೀಯ ನಾಯಕರಾದ ಡಾ.ಎಂ.ಬಿ.ಪಾಟೀಲರ ಹುಟ್ಟು ಹಬ್ಬದ ನಿಮಿತ್ತ ಅಂತರ್ ಕಾಲೇಜು ಕ್ರಿಕೆಟ್ ಟೂರ್ನಮೆಂಟ್ ತಿಕೋಟಾ ಆವರಣದ ಎಲ್ಲಾ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸದಾ ಶೈಕ್ಷಣಿಕ ಪಾಠ ಪ್ರವಚನಗಳಲ್ಲಿ ಸಮಯ ಕಳೆಯುವುದರಿಂದ ಇಂದಿನ ದಿನಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿ ಕಂಡು ಬರುತ್ತಿದೆ. ಇಂತಹ ಒತ್ತಡಗಳಿಂದ ಹೊರಬಂದು ದೈಹಿಕ ಕಸರತ್ತಿನಿಂದ ಆಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗಾಗಲಿ, ಶಿಕ್ಷಕರಿಗಾಗಲಿ ಒಂದು ರೀತಿಯ ಆನಂದ ಉಂಟಾಗುತ್ತದೆ. ಇಂತಹ ಕ್ರೀಡೆಗಳು ಮಾನಸಿಕ ಒತ್ತಡ ನಿವಾರಣೆ ಮಾಡಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಸಮಯ ತೊಡಗಿಸಿಕೊಳ್ಳಲು ಪುಷ್ಠಿ ನೀಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಚೇರಿ ಅಧೀಕ್ಷಕ ಎಸ್.ಪಿ.ಪಾಟೀಲ, ದೈಹಿಕ ಶಿಕ್ಷಣ ನಿರ್ದೇಶಕರಾದ ಬಿ.ಆರ್.ದೇಸಾಯಿ, ದೇಯಪ್ಪಗೌಡ ಪಾಟೀಲ , ಭೀಮಣ್ಣ ನಾಟೀಕಾರ, ನರ್ಸಿಂಗ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂತೋಷಕುಮಾರ ಇಂಡಿ, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಸ್.ಬೆಳಗಲಿ, ಮುಖ್ಯ ಶಿಕ್ಷಕ ಅಭಿಷೇಕ ಬಗಲಿ, ದೈಹಿಕ ಶಿಕ್ಷಕ ಕಲ್ಯಾಣಿ, ಮಲ್ಲಿಕಾರ್ಜುನ ಸಾಹು ಕುರ್ಪಿ ಸೇರಿದಂತೆ ಹಲವರಿದ್ದರು.

